ನಟಿ ಪಾರ್ವತಿ ತಿರುವೋತುಗೆ ಬಾಡಿ ಶೇಮಿಂಗ್: ನಟಿಯ ವಿಡಿಯೋ ವೈರಲ್

Untitled design 2026 02 03T120434.084

‘ಮಿಲನ’ ಖ್ಯಾತಿಯ ನಟಿ ಪಾರ್ವತಿ ತಿರುವೋತ್ (Parvathy Thiruvothu) ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಮತ್ತು ಧೈರ್ಯಶಾಲಿ ನಟಿಯರಲ್ಲಿ ಒಬ್ಬರು. ಅಭಿನಯ ಮಾತ್ರವಲ್ಲ, ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಸ್ವಭಾವದಿಂದಲೂ ಪಾರ್ವತಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ವೆರೈಟಿ (Variety) ನಿಯತಕಾಲಿಕೆಯ ಭಾರತೀಯ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಪಾರ್ವತಿ ಅಲ್ಟ್ರಾ-ಗ್ಲಾಮರಸ್ ಮತ್ತು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲೇ ವೈರಲ್ ಆದವು. ಆದರೆ, ಈ ವೈರಲ್ ವಿಡಿಯೋಗಳೊಂದಿಗೆ ಬಂದ ಕೆಲವು ಕಾಮೆಂಟ್‌ಗಳು ಅಭಿಮಾನಿಗಳನ್ನು ಬೆಚ್ಚಿಬೀಳಿಸುವಂತಿದ್ದವು. ಪಾರ್ವತಿ ಅವರ ದೇಹದ ಆಕಾರ, ವಯಸ್ಸು ಹಾಗೂ ಉಡುಪಿನ ಆಯ್ಕೆಯನ್ನು ಗುರಿಯಾಗಿಸಿಕೊಂಡು ಬಾಡಿ ಶೇಮಿಂಗ್ ಮಾಡಲಾಗಿದೆ.

ನಟಿ ಪಾರ್ವತಿ ತಿರುವೋತ್ ಅವರು ತಮ್ಮ ವೃತ್ತಿಜೀವನದಲ್ಲಿ ಯಾವಾಗಲೂ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು. ಫ್ಯಾಷನ್ ವಿಷಯದಲ್ಲೂ ಅವರು ಎಂದಿಗೂ ಟ್ರೆಂಡ್‌ಗಳಿಗೆ ಸೀಮಿತವಾಗಿರದೇ, ತಮ್ಮದೇ ಆದ ಶೈಲಿಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅವರ ಗ್ಲಾಮರಸ್ ಲುಕ್ ಕೆಲವರಿಗೆ ಅಸಹ್ಯವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಟೀಕೆಗಳಿಗೆ ಕಾರಣವಾಗಿದೆ.

ಈ ಘಟನೆ ಬಗ್ಗೆ ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಒಬ್ಬ ಮಹಿಳೆ ಯಾವ ರೀತಿಯ ಉಡುಪು ಧರಿಸಬೇಕು?”, “ನಿರ್ದಿಷ್ಟ ವಯಸ್ಸಿನ ನಂತರ ಗ್ಲಾಮರ್ ತಪ್ಪೇ?” ಎಂಬ ಹಳೆಯ ಮನಸ್ಥಿತಿಯ ಪ್ರತಿಬಿಂಬವೇ ಈ ಬಾಡಿ ಶೇಮಿಂಗ್ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರು ಪಾರ್ವತಿ ಪರವಾಗಿ ನಿಂತು, ಬಾಡಿ ಶೇಮಿಂಗ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದಾರೆ.

2007ರಲ್ಲಿ ಬಿಡುಗಡೆಯಾದ ‘ಮಿಲನ’ ಚಿತ್ರದ ಮೂಲಕ ಕನ್ನಡ ಸಿನಿರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಪಾರ್ವತಿ, ನಂತರ ‘ಪೃಥ್ವಿ’ ಸಿನಿಮಾದಲ್ಲೂ ಅಭಿನಯಿಸಿದ್ದರು. ಆದರೆ ‘ಅಂದರ್ ಬಾಹರ್’ ಬಳಿಕ ಅವರು ಮತ್ತೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದಾದ ನಂತರ ಪಾರ್ವತಿ ತಮ್ಮ ಗಮನವನ್ನು ಮಲಯಾಳಂ ಚಿತ್ರರಂಗದತ್ತ ಹರಿಸಿದರು.

37 ವರ್ಷದ ಪಾರ್ವತಿ ತಿರುವೋತ್ ಇಂದು ಕೂಡ ನಟನೆಯಲ್ಲೂ, ಫ್ಯಾಷನ್‌ನಲ್ಲೂ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಪ್ರತಿಯೊಂದು ಲುಕ್ ಕೂಡ ಚರ್ಚೆಗೆ ಗ್ರಾಸವಾಗುತ್ತಿದೆ.

ಇದೀಗ ಪಾರ್ವತಿ ಹಲವು ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಕ್ರಿಮಿನಲ್ ಅಟ್ ಫಸ್ಟ್ ಸೈಟ್’ ಮತ್ತು ‘ನೋಬಡಿ’ ಅವರ ಮುಂಬರುವ ಚಿತ್ರಗಳಲ್ಲಿ ಸೇರಿವೆ. ಇದರ ಜೊತೆಗೆ, ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್ ಅವರೊಂದಿಗೆ ಅವರು ನಟಿಸುತ್ತಿರುವ ವೆಬ್ ಸರಣಿ ವಿಶೇಷ ಕುತೂಹಲ ಮೂಡಿಸಿದೆ.

Exit mobile version