ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಸಮೀಪ ಕಲ್ಲು ಗಣಿಗಾರಿಕೆ ವೇಳೆ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು ಯುವ ಕಾರ್ಮಿಕರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಜಾರ್ಖಂಡ್ ಮೂಲದ ರವಿಕುಮಾರ್ ಸಿಂಗ್ (18) ಮತ್ತು ಸುಭಾಷ್ ಸಿಂಗ್ (18) ಮೃತ ದುರ್ದೈವಿ. ಇಬ್ಬರೂ ತಮ್ಮ ಜೀವನೋಪಾಯಕ್ಕಾಗಿ ಬೆಳಗಾವಿಗೆ ಕೆಲಸಕ್ಕೆ ಬಂದಿದ್ದರು.
ಅವಘಡ ಹೇಗೆ ಸಂಭವಿಸಿತು?
ಕಲ್ಯಾಣ ಶೆಟ್ಟಿ ಅಸೋಸಿಯೇಷನ್‌ನ ಮಾಲಿಕತ್ವದ ಗಣಿಗಾರಿಕೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಕಾರ್ಯಕ್ಕಾಗಿ 11 ಕೆವಿ ವಿದ್ಯುತ್ ಸಂಪರ್ಕವನ್ನು ಪಡೆಯಲಾಗಿತ್ತು. ಹಿಟ್ಯಾಚ್ ಜೆಸಿಬಿಯಿಂದ ಕೆಲಸ ಮಾಡುತ್ತಿದ್ದ ವೇಳೆ, ಯಂತ್ರದ ಬಕೆಟ್ ವಿದ್ಯುತ್ ತಂತಿಗೆ ತಗುಲಿತು.
ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಡ್ರೈವರ್ ರವಿಕುಮಾರ್ ಸಿಂಗ್ ಮತ್ತು ಸಹಾಯಕ ಸುಭಾಷ್ ಸಿಂಗ್ ತಕ್ಷಣ ಜೆಸಿಬಿಯಿಂದ ಕೆಳಗೆ ಜಿಗಿದರು. ಆದರೆ ಅವರು ಜಿಗಿದ ಸ್ಥಳದಲ್ಲೇ ಸ್ವಲ್ಪ ನೀರು ನಿಂತಿತ್ತು. ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ನೆಲ ಮತ್ತು ನೀರಿನ ಮೂಲಕವೂ ವಿದ್ಯುತ್ ಹರಿದಿತ್ತು. ಇಬ್ಬರೂ ನೀರಿಗೆ ಕಾಲಿಟ್ಟ ಕ್ಷಣವೇ ವಿದ್ಯುತ್ ತಗುಲಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಲೀಕರ ಬೇಜವಾಬ್ದಾರಿ
ಇಷ್ಟೊಂದು ಗಂಭೀರ ಘಟನೆ ನಡೆದಿದ್ದರೂ, ಗಣಿಗಾರಿಕೆ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಸ್ಥಳೀಯರೇ ಘಟನೆಯನ್ನು ಗಮನಿಸಿ ಸವದತ್ತಿ ಪೊಲೀಸ್ ಠಾಣೆಗೆ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಇಬ್ಬರು ಯುವಕರ ಮೃತದೇಹಗಳನ್ನು ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಪೊಲೀಸ್ ತನಿಖೆ ಆರಂಭ
ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಣಿಗಾರಿಕೆ ಮಾಲೀಕರು ಮತ್ತು ಸ್ಥಳೀಯ ಮೇಲ್ವಿಚಾರಕರ ವಿರುದ್ಧ ಕಾನೂನು ಕ್ರಮಕ್ಕೆ ತನಿಖೆ ಮುಂದುವರೆದಿದೆ.
