ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆಯುತ್ತಿರುವ ಡಿಸಿಸಿ (ಡಿಸ್ಟ್ರಿಕ್ಟ್ ಕೋ-ಆಪರೇಟಿವ್) ಬ್ಯಾಂಕ್ ಚುನಾವಣೆಯು ತೀವ್ರ ಕಾವು ಪಡೆದುಕೊಂಡಿದೆ. ಈ ಚುನಾವಣೆಯ ಹಿನ್ನೆಲೆಯಲ್ಲಿ ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ನಡುವೆ ಜಿದ್ದಾಜಿದ್ದಿನ ವಾತಾವರಣ ಸೃಷ್ಟಿಯಾಗಿದೆ. ಚಿಕ್ಕೋಡಿಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಶುಗರ್ಸ್ ಕಟ್ಟಡದ ಸುತ್ತಲೂ ಪುಢಾರಿಗಳು ಲಾಂಗು, ಮಚ್ಚು ಮುಂತಾದ ಮಾರಕಾಸ್ತ್ರಗಳನ್ನು ಹಿಡಿದು ರಾಜಾರೋಷವಾಗಿ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೃಷಿ ಪತ್ತಿನ ಸಹಕಾರಿ ಸಂಘ (PKPS) ಸದಸ್ಯರನ್ನು ವಿರೋಧಿ ಬಣದಿಂದ ಕಿಡ್ನಾಪ್ ಮಾಡದಂತೆ ತಡೆಯಲು ಈ ಕಾವಲು ವ್ಯವಸ್ಥೆ ಮಾಡಲಾಗಿದೆ ಎನ್ನಲಾಗುತ್ತಿದೆ. ವಿಶ್ವರಾಜ್ ಶುಗರ್ಸ್ ಕಟ್ಟಡವು ಈ ಚುನಾವಣೆಯ ಕೇಂದ್ರಬಿಂದುವಾಗಿದ್ದು, ಇಲ್ಲಿ ಸದಸ್ಯರನ್ನು ಕಾವಲಿಡಲು ಭಾರೀ ಭದ್ರತೆಯನ್ನು ನೀಡಲಾಗಿದೆ. ಈ ಭದ್ರತೆಯಲ್ಲಿ ಭಾಗಿಯಾದ ಕೆಲವರು ಲಾಂಗು, ಮಚ್ಚುಗಳೊಂದಿಗೆ ರಾಜಾರೋಷವಾಗಿ ಓಡಾಡುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಚಿಕ್ಕೋಡಿಯಲ್ಲಿ ಕತ್ತಿ ಸಹೋದರರ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ. ಈ ಚುನಾವಣೆಯಲ್ಲಿ ಕತ್ತಿ ಮತ್ತು ಜಾರಕಿಹೊಳಿ ಕುಟುಂಬಗಳ ನಡುವಿನ ರಾಜಕೀಯ ದ್ವೇಷವು ತಾರಕಕ್ಕೇರಿದೆ. ಈ ಎರಡು ಕುಟುಂಬಗಳ ರಾಜಕೀಯ ಪೈಪೋಟಿಯು ಡಿಸಿಸಿ ಬ್ಯಾಂಕ್‌ನ ನಿಯಂತ್ರಣಕ್ಕಾಗಿ ನಡೆಯುತ್ತಿದ್ದು, ಇದರಿಂದ ಸ್ಥಳೀಯ ರೈತರು ಮತ್ತು ಸಹಕಾರಿ ಸಂಘದ ಸದಸ್ಯರ ಮೇಲೆ ಒತ್ತಡ ಹೆಚ್ಚಾಗಿದೆ. ಕೆಲವು ಸದಸ್ಯರನ್ನು “ಕಾವಲಿಡುವ” ಹೆಸರಿನಲ್ಲಿ ಕಿಡ್ನಾಪ್ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.