ಕರ್ನಾಟಕದ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ನಡೆದ ದೇಶದ ಇತಿಹಾಸದ ಅತಿ ದೊಡ್ಡ ದರೋಡೆ ಪ್ರಕರಣವೊಂದು ಈಗ ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್ ಮಾಡುವ ಮೂಲಕ ಬರೋಬ್ಬರಿ 400 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ. ಈ ಪ್ರಕರಣ ಈಗ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವೆ ಭಾರಿ ಸಂಚಲನ ಮೂಡಿಸಿದೆ.
400 ಕೋಟಿ ಗಯಾಬ್
2025ರ ಅಕ್ಟೋಬರ್ 16ರಂದು ಈ ಬೃಹತ್ ದರೋಡೆ ನಡೆದಿದೆ ಎನ್ನಲಾಗಿದೆ. ಮಹಾರಾಷ್ಟ್ರದ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬುವವರಿಗೆ ಸೇರಿದ 400 ಕೋಟಿ ರೂಪಾಯಿ ನಗದನ್ನು ಎರಡು ಕಂಟೇನರ್‌ಗಳಲ್ಲಿ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯ ಪ್ರದೇಶವಾದ ಛೋರ್ಲಾ ಘಾಟ್ ಮಾರ್ಗವಾಗಿ ಈ ವಾಹನಗಳು ಚಲಿಸುತ್ತಿದ್ದಾಗ ಕಿಡಿಗೇಡಿಗಳು ಸಿನಿಮೀಯ ಮಾದರಿಯಲ್ಲಿ ಕಂಟೇನರ್‌ಗಳನ್ನು ಹೈಜಾಕ್ ಮಾಡಿದ್ದಾರೆ.
ಈ ದರೋಡೆ ಪ್ರಕರಣದ ಬಗ್ಗೆ ತಿಳಿದುಬಂದಿದ್ದೇ ರಣರೋಚಕ ಕಥೆ. ಕಂಟೇನರ್ ಕಣ್ಮರೆಯಾದ ನಂತರ, ಉದ್ಯಮಿ ಕಿಶೋರ್ ಶೇಟ್ ತನ್ನ ಸ್ನೇಹಿತ ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಕಂಟೇನರ್ ಹೈಜಾಕ್ ಮಾಡಲು ಸಂದೀಪ್ ಅವರೇ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ, ಕಿಶೋರ್ ಬೆಂಬಲಿಗರು ಸಂದೀಪ್ ಅವರನ್ನು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು.
ಸುಮಾರು ಒಂದೂವರೆ ತಿಂಗಳ ಕಾಲ ಸಂದೀಪ್ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು, ಭೀಕರ ಚಿತ್ರಹಿಂಸೆ ನೀಡಲಾಗಿತ್ತು. ಲೂಟಿಯಾದ 400 ಕೋಟಿ ಹಣವನ್ನು ನೀನೇ ಎಗಿರಿಸಿದ್ದೀಯಾ, ಅದನ್ನು ಹಿಂದಿರುಗಿಸದಿದ್ದರೆ ನಿನ್ನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. ಹೇಗೋ ಮಾಡಿ ಅವರಿಂದ ತಪ್ಪಿಸಿಕೊಂಡ ಸಂದೀಪ್ ಪಾಟೀಲ್, ನಾಸಿಕ್ ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ 400 ಕೋಟಿ ರೂಪಾಯಿ ಹಣದ ಕಂಟೇನರ್ ನಾಪತ್ತೆಯಾಗಿರುವ ವಿಚಾರ ಪ್ರಸ್ತಾಪವಾದಾಗ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ತನಿಖೆಗೆ ಮಹಾರಾಷ್ಟ್ರ ಸಿಎಂ ಆದೇಶ
ಪ್ರಕರಣದ ಗಂಭೀರತೆಯನ್ನು ಅರಿತ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಈ ಬೃಹತ್ ದರೋಡೆಯ ತನಿಖೆಗೆ ವಿಶೇಷ ತನಿಖಾ ದಳ (SIT) ರಚಿಸಿ ಆದೇಶ ಹೊರಡಿಸಿದ್ದಾರೆ. ಈ ಹಣವು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಕೆ ಮಾಡಲು ಸಾಗಿಸಲಾಗುತ್ತಿತ್ತೇ ಎಂಬ ಸಂಶಯವೂ ಮೂಡಿದೆ. ಈಗಾಗಲೇ ಸಂದೀಪ್ ಅಪಹರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ. ಈ ಇಬ್ಬರ ಬಂಧನದ ಬಳಿಕವೇ ಕಂಟೇನರ್ ಹೈಜಾಕ್ ಪ್ರಕರಣ ಸುಖಾಂತ್ಯವಾಗುವ ಸಾಧ್ಯತೆ ಇದೆ.
ಈ ಪ್ರಕರಣವು ಮೂರು ರಾಜ್ಯಗಳಿಗೆ ಸಂಬಂಧಿಸಿದ್ದರಿಂದ, ಮಹಾರಾಷ್ಟ್ರ ಸರ್ಕಾರವು ಗೋವಾ ಮತ್ತು ಕರ್ನಾಟಕ ಪೊಲೀಸರ ನೆರವು ಕೋರಿದೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಾಮರಾಜನ್ ಅವರಿಗೂ ಪತ್ರ ಬರೆಯಲಾಗಿದ್ದು, ಛೋರ್ಲಾ ಘಾಟ್ ಸುತ್ತಮುತ್ತ ತನಿಖೆ ಚುರುಕುಗೊಳಿಸಲಾಗಿದೆ.
