ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ವಿರುದ್ಧದ ದೌರ್ಜನ್ಯಗಳು ತಾರಕಕ್ಕೇರಿವೆ. ದೇಶದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಉಗ್ರಗಾಮಿ ಧೋರಣೆಯುಳ್ಳ ಕಿಡಿಗೇಡಿಗಳು ಅಮಾಯಕ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಇತ್ತೀಚಿಗೆ 23 ವರ್ಷದ ಹಿಂದೂ ಯುವಕ ಚಂಚಲ್ ಚಂದ್ರ ಭೌಮಿಕ್ ಎಂಬ ಯುವಕನನ್ನು ಗ್ಯಾರೇಜ್‌ನಲ್ಲಿ ಮಲಗಿದ್ದಾಗಲೇ ಜೀವಂತವಾಗಿ ಸುಟ್ಟು ಹತ್ಯೆ ಮಾಡಲಾಗಿದೆ.
ರಾಜಧಾನಿ ಢಾಕಾದಿಂದ ಕೇವಲ 50 ಕಿ.ಮೀ ದೂರದಲ್ಲಿರುವ ನರಸಿಂಗ್ಡಿ ನಗರದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಕುಮಿಲ್ಲಾ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದ ಚಂಚಲ್ ಚಂದ್ರ ಭೌಮಿಕ್ ಅವರು ನರಸಿಂಗ್ಡಿ ಪೊಲೀಸ್ ಲೈನ್ಸ್ ಬಳಿಯ ಮಸೀದಿ ಮಾರುಕಟ್ಟೆ ಪ್ರದೇಶದ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ರಾತ್ರಿ ಕೆಲಸ ಮುಗಿಸಿ ದಣಿದಿದ್ದ ಭೌಮಿಕ್ ಗ್ಯಾರೇಜ್ ಒಳಗೇ ನಿದ್ರೆಗೆ ಜಾರಿದ್ದರು.
ಇದಕ್ಕಾಗೆ ಕಾದು, ಹೊಂಚು ಹಾಕಿದ್ದ ಅಪರಿಚಿತ ದುಷ್ಕರ್ಮಿಗಳು ಗ್ಯಾರೇಜ್‌ಗೆ ಬೆಂಕಿ ಹಚ್ಚಿದ್ದಾರೆ. ಗ್ಯಾರೇಜ್ ಒಳಗೆ ಪೆಟ್ರೋಲ್, ಎಂಜಿನ್ ಆಯಿಲ್ ಸೇರಿದಂತೆ ಇತರೆ ದಹಿಸುವ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಇದರಿಂದಾಗಿ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಗ್ಯಾರೇಜ್ ಅನ್ನು ಆವರಿಸಿಕೊಂಡಿತು. ಗಾಢ ನಿದ್ರೆಯಲ್ಲಿದ್ದ ಚಂಚಲ್ ಬೆಂಕಿ ಮತ್ತು ದಟ್ಟ ಹೊಗೆಯಿಂದ ಉಸಿರುಗಟ್ಟಿ, ಸುಟ್ಟ ಗಾಯಗಳಿಂದ ನರಳಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ಇದು ಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ. ಹತ್ತಿರದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಳಿಕೋರರು ಗ್ಯಾರೇಜ್‌ಗೆ ಬೆಂಕಿ ಹಚ್ಚುವ ದೃಶ್ಯಗಳು ಸೆರೆಯಾಗಿವೆ. ನಾವು ಶವವನ್ನು ವಶಪಡಿಸಿಕೊಂಡಿದ್ದೇವೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಅಪರಾಧಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ ಹಿಂದೂಗಳ ಸುರಕ್ಷತೆ ಮರೀಚಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ನಡೆದ ಮೂರನೇ ಪ್ರಮುಖ ದಾಳಿ ಇದಾಗಿದೆ. ಈ ಹಿಂದೆ ಗಾಜಿಪುರ ಜಿಲ್ಲೆಯಲ್ಲಿ ಸಿಹಿತಿಂಡಿ ಅಂಗಡಿ ಮಾಲೀಕನನ್ನು ರಕ್ಷಿಸಲು ಹೋದ ಹಿಂದೂ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಯಿತು. ಸಿಲ್ಹೆಟ್ ಜಿಲ್ಲೆಯಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಯಿತು ಮತ್ತು ಫೆನಿ ಜಿಲ್ಲೆಯಲ್ಲಿ ಆಟೋರಿಕ್ಷಾ ಚಾಲಕನನ್ನು ಇರಿದು ಹತ್ಯೆ ಮಾಡಲಾಯಿತು.
ಬಾಂಗ್ಲಾದ ಒಟ್ಟು ಜನಸಂಖ್ಯೆಯಲ್ಲಿ ಶೇ. 7.95 ರಷ್ಟಿರುವ (ಸುಮಾರು 13.13 ಮಿಲಿಯನ್) ಹಿಂದೂ ಸಮುದಾಯವು ಭಯದಿಂದ ಬದುಕುತ್ತಿದ್ದಾರೆ. ಈ ಸತತ ದಾಳಿಗಳ ಬಗ್ಗೆ ಭಾರತ ಸರ್ಕಾರವು ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತರ ರಕ್ಷಣೆಗೆ ಬಾಂಗ್ಲಾ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
