ಚಿಕ್ಕಬಳ್ಳಾಪುರ, ಏಪ್ರಿಲ್ 8: ರಾಜ್ಯಾದ್ಯಂತ ಬೇಸಿಗೆಯ ಬಿಸಿಲು ತೀವ್ರಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಧಗೆಯಿಂದ ಪಾರಾಗಲು ಜನರು ಪರದಾಡುವಂತಾಗಿದೆ. ಇದರ ನಡುವೆ ಮದ್ಯಪ್ರಿಯರು ಬಿಸಿ ಪಾನೀಯಗಳ ಬದಲು ತಣ್ಣನೆಯ ಬಿಯರ್‌ಗೆ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳಲು ಬಿಯರ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಅದರ ಬೇಡಿಕೆ ಮತ್ತು ಮಾರಾಟ ಎರಡೂ ಏರಿಕೆಯಾಗಿವೆ.
ಚಿಕ್ಕಬಳ್ಳಾಪುರದಲ್ಲಿ ಮಾಸಿಕ ಮಾರಾಟದ ಅಂಕಿ-ಅಂಶಗಳು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಬಿಯರ್ ಮಾರಾಟದ ಅಂಕಿ-ಅಂಶಗಳು ಬೇಸಿಗೆಯ ಪ್ರಭಾವವನ್ನು ತೋರಿಸುತ್ತವೆ. ಜನವರಿಯಲ್ಲಿ ಒಟ್ಟು 50,272 ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಫೆಬ್ರವರಿಯಲ್ಲಿ ಅದು 63,372 ಬಾಕ್ಸ್ ಗೆ ಏರಿಕೆಯಾಗಿದೆ. ಮಾರ್ಚ್ ತಿಂಗಳಿಗೆ ಬರುವಾಗ ಮಾರಾಟ 88,523 ಬಾಕ್ಸ್ ಗಳನ್ನು ತಲುಪಿದೆ. ಅಂದರೆ, ಕೇವಲ ಮೂರು ತಿಂಗಳಲ್ಲಿ ಸುಮಾರು 76% ರಷ್ಟು ಬೆಳವಣಿಗೆಯಾಗಿದೆ.
ಹಿಂದಿನ ವರ್ಷದ ಕುಸಿತ ಮತ್ತು ಈಗಿನ ಚೇತರಿಕೆ
ಸೆಪ್ಟೆಂಬರ್ 2025ರ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 195.27 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗಿಂತ 47.46 ಲಕ್ಷ ಬಾಕ್ಸ್ (ಶೇ. 19.55) ಕಡಿಮೆಯಾಗಿತ್ತು. ಮಳೆ ಮತ್ತು ಚಳಿಯಿಂದಾಗಿ ಈ ಕುಸಿತ ಸಂಭವಿಸಿತ್ತು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರೇ ಹೇಳಿದ್ದರು. ಆದರೆ ಈಗ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಾರಾಟದ ವೇಗವು ಮತ್ತೆ ಹೆಚ್ಚಾಗಿದೆ. ಬಿಯರ್‌ಗೆ ಇರುವ ಬೇಡಿಕೆ ಕೆಲವೊಮ್ಮೆ ನೀರಿನ ಬೇಡಿಕೆಯನ್ನೂ ಮೀರಿಸುವ ಸ್ಥಿತಿ ತಲುಪಿದೆ.
ಸ್ಟಾಕ್ ಕೊರತೆ: ಬಾರ್ ಮಾಲೀಕರ ಅಳಲು
ಬಿಯರ್‌ಗೆ ಬೇಡಿಕೆ ಹೆಚ್ಚಾಗಿದೆ, ಆದರೆ ಸರಬರಾಜು ಸರಿಯಾಗಿಲ್ಲ. ಬಡ್ ವೈಸರ್, ಕೆಎಫ್, ಟೂಬರ್ಗ, ಆರ್.ಸಿ, ಬೂಲೆಟ್, ಸನಿಬೀಚ್ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಬಿಯರ್ ಅನ್ನು ಗ್ರಾಹಕರು ಹೆಚ್ಚಾಗಿ ಬಯಸುತ್ತಿದ್ದಾರೆ. ಬಾರ್ ಮಾಲೀಕರು ತಮ್ಮ ಅಗತ್ಯಕ್ಕೆ ತಕ್ಕಷ್ಟು ಬಿಯರ್ ಪೂರೈಕೆ ಮಾಡುವಂತೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ ಇದೀಗ ಬೇಡಿಕೆಯಷ್ಟು ಸ್ಟಾಕ್ ಸಿಗುತ್ತಿಲ್ಲ. ಸಾಕಷ್ಟು ಬಿಯರ್ ಸ್ಟಾಕ್ ಇಲ್ಲದಿದ್ದಾಗ ಗ್ರಾಹಕರನ್ನು ಸಮಾಧಾನಪಡಿಸುವುದು ದೊಡ್ಡ ಸವಾಲಾಗಿದೆ ಎಂದು ಬಾರ್ ಮಾಲೀಕರು ಹೇಳುತ್ತಾರೆ.
ಬಿಯರ್ ಹೆಚ್ಚು ಕುಡಿಯುವ ಅಪಾಯಗಳು
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುತ್ತದೆ ಎಂಬ ಕಾರಣಕ್ಕೆ ಬಿಯರ್ ಸೇವನೆಯನ್ನು ಹೆಚ್ಚಿಸಿಕೊಳ್ಳುವುದು ಸೂಕ್ತವಲ್ಲ. ವೈದ್ಯರ ಪ್ರಕಾರ, ಅತಿಯಾದ ಬಿಯರ್ ಸೇವನೆಯು ನಿರ್ಜಲೀಕರಣ, ಯಕೃತ್ತಿನ ಹಾನಿ, ರಕ್ತದೊತ್ತಡದ ಸಮಸ್ಯೆಗಳನ್ನು ಉಂಟುಮಾಡಬಹುದು. ಬೇಸಿಗೆಯಲ್ಲಿ ಹೆಚ್ಚು ನೀರು, ಮಜ್ಜಿಗೆ, ತೆಂಗಿನ ನೀರು, ಹಣ್ಣಿನ ರಸಗಳನ್ನು ಕುಡಿಯುವುದು ಆರೋಗ್ಯಕರ.
ಸರಬರಾಜು ಸಮಸ್ಯೆಗೆ ಅಬಕಾರಿ ಇಲಾಖೆಯ ಕ್ರಮವೇನು?
ಬಾರ್ ಗಳಿಗೆ ಸಾಕಷ್ಟು ಬಿಯರ್ ಸರಬರಾಜಾಗದಿರುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬೇಡಿಕೆ ಹೆಚ್ಚಿರುವುದರಿಂದ ತಯಾರಕ ಕಂಪನಿಗಳಿಗೆ ಉತ್ಪಾದನೆ ಹೆಚ್ಚಿಸುವಂತೆ ಸೂಚಿಸಬೇಕು. ಇದೇ ಮಾದರಿಯಲ್ಲಿ ಮುಂಬರುವ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಾರಾಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
