ಬೆಂಗಳೂರು, ಮಾರ್ಚ್ 27: ಬೆಂಗಳೂರು ನಗರದ ಪ್ರಮುಖ ಸಂಚಾರ ಕೇಂದ್ರಗಳಲ್ಲಿ ಒಂದಾದ ಮಾರತಹಳ್ಳಿ ರೈಲ್ವೆ ಓವರ್ ಬ್ರಿಡ್ಜ್ (Marathahalli Bridge) ಮೇಲೆ ಮೆಟ್ರೋ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ಈ ನಿರ್ಬಂಧ ಜಾರಿಯಲ್ಲಿರಲಿದೆ. ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾಹಿಲ್ ಬಾಗ್ಲಾ (IPS) ಅವರು ಅಧಿಕೃತ ಸಂಚಾರ ಸಲಹೆ (Traffic Advisory) ಹೊರಡಿಸಿದ್ದಾರೆ.
ನಿರ್ಬಂಧದ ಅವಧಿ ಮತ್ತು ಸಮಯ
-
ದಿನಾಂಕ: ಮಾರ್ಚ್ 27, 2026 ರಿಂದ ಮಾರ್ಚ್ 29, 2026 ರವರೆಗೆ (ಒಟ್ಟು 3 ದಿನಗಳು)
-
ಸಮಯ: ಪ್ರತಿದಿನ ರಾತ್ರಿ 12:00 ಗಂಟೆಯಿಂದ ಬೆಳಿಗ್ಗೆ 03:00 ಗಂಟೆಯವರೆಗೆ ಮಾತ್ರ
ರಾತ್ರಿ ವೇಳೆಯಲ್ಲಿ ನಡೆಯುವ ಮೆಟ್ರೋ ಕಾಮಗಾರಿಯನ್ನು ಸುಗಮವಾಗಿ ನಡೆಸಲು ಈ ಸಮಯದಲ್ಲಿ ಸಂಚಾರ ನಿರ್ಬಂಧವನ್ನು ಜಾರಿಗೊಳಿಸಲಾಗಿದೆ. ದಿನದ ವೇಳೆಯಲ್ಲಿ ಸಂಚಾರ ಯಥಾವತ್ತಾಗಿ ಮುಂದುವರೆಯಲಿದೆ.
ಸಂಚಾರ ನಿರ್ಬಂಧಿಸಿರುವ ರಸ್ತೆಗಳು
ಮಾರತಹಳ್ಳಿ ಬ್ರಿಡ್ಜ್ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿರ್ದಿಷ್ಟವಾಗಿ ಈ ಕೆಳಗಿನ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ..
-
ಹೆಚ್.ಎ.ಎಲ್ ಕಡೆಯಿಂದ: ವರ್ತೂರು ಮುಖ್ಯರಸ್ತೆ ಮೂಲಕ ಮಾರತಹಳ್ಳಿ ಬ್ರಿಡ್ಜ್ ಮಾರ್ಗವಾಗಿ ವರ್ತೂರು ಮತ್ತು ವೈಟ್‌ಫೀಲ್ಡ್ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರ ನಿಷೇಧ.
-
ವರ್ತೂರು/ವೈಟ್ಫೀಲ್ಡ್ ಕಡೆಯಿಂದ: ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಯಿಂದ ಮಾರತಹಳ್ಳಿ ಬ್ರಿಡ್ಜ್ ಮೂಲಕ ಹೆಚ್.ಎ.ಎಲ್ ಕಡೆಗೆ ಬರುವ ವಾಹನಗಳ ಸಂಚಾರ ನಿಷೇಧ.
ಪರ್ಯಾಯ ಮಾರ್ಗಗಳು (Alternative Routes)
ಸಂಚಾರ ನಿರ್ಬಂಧದಿಂದ ಪ್ರಭಾವಿತರಾಗುವ ವಾಹನ ಸವಾರರಿಗೆ ಪೊಲೀಸ್ ಇಲಾಖೆ ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.
1. ಹೆಚ್.ಎ.ಎಲ್ ನಿಂದ ವರ್ತೂರು/ವೈಟ್‌ಫೀಲ್ಡ್ ಕಡೆಗೆ ಹೋಗುವವರು
ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಕಾರ್ತಿಕ್ ನಗರ ಜಂಕ್ಷನ್ ತಲುಪಿ. ಅಲ್ಲಿಂದ ಹೊರ ವರ್ತುಲ ರಸ್ತೆ (Outer Ring Road) ಮೂಲಕ ದೊಡ್ಡನೆಕ್ಕುಂದಿ ಪ್ರೈಓವರ್ ಕೆಳಗೆ ಯು-ಟರ್ನ್ ಪಡೆದು ಆಲೈನ್ ಇಕೋ ರಸ್ತೆ, ಆಂಜನೇಯ ಜಂಕ್ಷನ್, ಕುಂದಲಹಳ್ಳಿ ಮುಖ್ಯರಸ್ತೆ ಮತ್ತು ಗ್ರಾಫೈಟ್ ರಸ್ತೆ ಮೂಲಕ ನೀಮ್ಮ ಸ್ಥಳಕ್ಕೆ ತಲುಪಬಹುದು.
2. ವರ್ತೂರು/ವೈಟ್‌ಫೀಲ್ಡ್ ನಿಂದ ಹೆಚ್.ಎ.ಎಲ್ ಕಡೆಗೆ ಬರುವವರು
-
ಮಾರ್ಗ ಎ: ಕುಂದಲಹಳ್ಳಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಆಂಜನೇಯ ಜಂಕ್ಷನ್, ಆಲೈನ್ ಇಕೋ ರಸ್ತೆ ಮೂಲಕ ಹೊರ ವರ್ತುಲ ರಸ್ತೆ ಸೇರಿ ಕಾರ್ತಿಕ್ ನಗರ ಜಂಕ್ಷನ್ ಮತ್ತು ದೊಡ್ಡನೆಕ್ಕುಂದಿ ಜಂಕ್ಷನ್ ಮೂಲಕ ಹೆಚ್.ಎ.ಎಲ್ ತಲುಪಬಹುದು.
-
ಮಾರ್ಗ ಬಿ: ವಿಬ್ಗಯೋರ್ ಜಂಕ್ಷನ್ ಮೂಲಕ ವಿಬ್ಗಯೋರ್ ಸ್ಕೂಲ್ ರಸ್ತೆ ಸೇರಿ ಬಾಲಗೆರೆ ಮುಖ್ಯ ರಸ್ತೆ, ಕಾಡುಬೀಸನಹಳ್ಳಿ ಜಂಕ್ಷನ್ ಮತ್ತು ಹೊರ ವರ್ತುಲ ರಸ್ತೆ ಮೂಲಕ ಮಾರತಹಳ್ಳಿ ಬ್ರಿಡ್ಜ್ ಜಂಕ್ಷನ್ ತಲುಪಿ ಹೆಚ್.ಎ.ಎಲ್ ಕಡೆಗೆ ಸಾಗಬಹುದು.
ಸಾರ್ವಜನಿಕರಿಗೆ ಮನವಿ
ಮೆಟ್ರೋ ಕಾಮಗಾರಿಯು ಸುಗಮವಾಗಿ ನಡೆಯಲು ಮತ್ತು ಅನಗತ್ಯ ಸಂಚಾರ ದಟ್ಟಣೆ ತಪ್ಪಿಸಲು ವಾಹನ ಸವಾರರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. ನಿರ್ಬಂಧದ ಸಮಯದಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವುದರಿಂದ ಸಮಯದ ವ್ಯರ್ಥವನ್ನು ತಪ್ಪಿಸಬಹುದು ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದು.
