ಪ್ರೀತಿಯ ಮಾಯಾಜಾಲಕ್ಕೆ ಸಿಲುಕಿದ ಟೆಕ್ಕಿ: ಲವ್ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಾಯಾಂಗನೆ

Untitled design 2026 04 02T170327.324

ಬೆಂಗಳೂರು: ಪ್ರೀತಿ ಮತ್ತು ಮದುವೆಯ ಆಮಿಷ ತೋರಿಸಿ ಸೈಬರ್ ವಂಚಕಿ ಒಬ್ಬಳು ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರನ್ನು 18 ಲಕ್ಷ ರೂಪಾಯಿಗಳಷ್ಟು ಮೋಸ ಮಾಡಿರುವ ಘಟನೆ ನಡೆದಿದೆ. ನಗರದ ನ್ಯೂ ತಿಪ್ಪಸಂದ್ರದಲ್ಲಿ ನೆಲೆಸಿರುವ 29 ವರ್ಷದ ತಂತ್ರಜ್ಞನೊಬ್ಬ ಈ ವಂಚನೆಗೆ ತುತ್ತಾಗಿದ್ದಾನೆ. ಪ್ರೀತಿಯ ಹೆಸರಲ್ಲಿ ಹಣ ಕಳೆದುಕೊಂಡ ಬಳಿಕ ಆತ ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ.

ಡೇಟಿಂಗ್ ಆ್ಯಪ್ ನಿಂದ ಪರಿಚಯ: 

ದೂರುದಾರರ ಪ್ರಕಾರ, ಆತನೊಬ್ಬ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದ. ಅಲ್ಲೇ ಮುಂಬೈ ಮೂಲದ ‘ಅಂಜಲಿ ಕುಶ್ಲಾನಿ’ ಎಂದು ಪರಿಚಯಿಸಿಕೊಂಡ ಯುವತಿ, ಆತನ ಜೊತೆಗೆ ಸ್ನೇಹ ಬೆಳೆಸಿದಳು. ಕೆಲವೇ ದಿನಗಳಲ್ಲಿ ಆಕೆ ವಾಟ್ಸಾಪ್ ಮೂಲಕ ಮಾತುಕತೆ ಮುಂದುವರೆಸಿದಳು.

ಮದುವೆ ಆಮಿಷ  

ಮಾತುಕತೆ ಹಂತ ಹಂತವಾಗಿ ಬೆಳೆದಂತೆ, ಆಕೆ ತಾನು ಎಂಜಿನಿಯರ್ ಜೊತೆಗೆ ಮದುವೆಯಾಗಲು ಆಸಕ್ತಿ ಇದೆ ಎಂದು ತಿಳಿಸಿದಳು. ‘ನಮ್ಮ ಭವಿಷ್ಯಕ್ಕಾಗಿ ಹಣ ಗಳಿಸಬೇಕು’ ಎಂಬ ಕಾರಣ ನೀಡಿ, ಆನ್ಲೈನ್ ಟ್ರೇಡಿಂಗ್ (ಆನೈನ್ ಟ್ರೇಡಿಂಗ್) ನಲ್ಲಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಿದಳು. ಮೊದಮೊದಲು ಸಣ್ಣ ಮೊತ್ತ ಹೂಡಿಸಿ, ಅದಕ್ಕೆ ‘ಲಾಭ’ ತೋರಿಸಿ ಆತನಲ್ಲಿ ವಿಶ್ವಾಸ ಮೂಡಿಸಿದಳು.

ನಂತರ ಅಂಜಲಿ ಎಂಜಿನಿಯರ್ ಅನ್ನು ದೊಡ್ಡ ಮೊತ್ತದ ಹೂಡಿಕೆಗೆ ಪ್ರೇರೇಪಿಸಿದಳು. ‘ಸ್ಟಾಕ್ಗಳಲ್ಲಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚು ಲಾಭ ಬರುತ್ತದೆ’ ಎಂದು ಹೇಳಿ ಆತ ಬ್ಯಾಂಕ್ ಖಾತೆಯಿಂದ 18 ಲಕ್ಷ ರೂಪಾಯಿಗಳನ್ನು ತಾನು ಹೇಳಿದ ಖಾತೆಗಳಿಗೆ ವರ್ಗಾಯಿಸುವಂತೆ ಮಾಡಿದಳು. ವಂಚಕಿ ನಿರ್ದಿಷ್ಟ ನಕಲಿ ಟ್ರೇಡಿಂಗ್ ವೆಬ್ಸೈಟ್ ಒಂದನ್ನು ತೋರಿಸಿ, ಅಲ್ಲಿ ಹಣ ಹಾಕಿದರೆ ಅದು ದುಪ್ಪಟ್ಟಾಗುತ್ತದೆ ಎಂಬ ಭರವಸೆ ನೀಡಿದ್ದಳು.

ಕೆಲವೇ ದಿನಗಳಲ್ಲಿ ಎಂಜಿನಿಯರ್ ತಾನು ಹಾಕಿದ ಹಣವನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಯಾವುದೇ ಮೊತ್ತ ಬಿಡುಗಡೆಯಾಗಲಿಲ್ಲ. ಅನುಮಾನಗೊಂಡು ಆತ ಆಕೆಯನ್ನು ಪ್ರಶ್ನಿಸಿದಾಗ, ಅಂಜಲಿ ತಕ್ಷಣ ತನ್ನ ಮೊಬೈಲ್ ಸಂಖ್ಯೆ ಮತ್ತು ವಾಟ್ಸಾಪ್ ಖಾತೆಯನ್ನು ಬ್ಲಾಕ್ ಮಾಡಿದಳು. ಆಗಲೇ ಆತನಿಗೆ ಮೋಸವಾಗಿರುವುದು ಗೊತ್ತಾಯಿತು.

ತಕ್ಷಣವೇ ಎಂಜಿನಿಯರ್ ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣವನ್ನು  ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿ ಮಹಿಳೆಯಾದ ‘ಅಂಜಲಿ ಕುಶ್ಲಾನಿ’ಗಾಗಿ ಶೋಧ ನಡೆಸುತ್ತಿದ್ದಾರೆ. 

Exit mobile version