ಇಬ್ಬರು ವಿದ್ಯಾರ್ಥಿನಿಯರ ಮೇಲೆ ಬೀದಿನಾಯಿಗಳ ದಾಳಿ

ಕಕಹ

ಬೆಂಗಳೂರು: ರಾಜ್ಯ ರಾಜಧಾನಿಯ ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಬೀದಿನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಈ ದಾಳಿಯಿಂದ ಓರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಯಗೊಂಡ ವಿದ್ಯಾರ್ಥಿನಿಯರನ್ನು ಸೌಜನ್ಯ ಮತ್ತು ನಿಕ್ಷಿತಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಮೂರನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಘಟನೆಯು ಕ್ಯಾಂಪಸ್‌ನೊಳಗೆ ಸಂಜೆ ಸಮಯದಲ್ಲಿ ಸಂಭವಿಸಿದ್ದು, ವಿದ್ಯಾರ್ಥಿನಿಯರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾಗ ಬೀದಿನಾಯಿಗಳ ಗುಂಪೊಂದು ಇದ್ದಕ್ಕಿದ್ದಂತೆ ದಾಳಿ ನಡೆಸಿದೆ. ಈ ದಾಳಿಯಿಂದ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೌಜನ್ಯ ಎಂಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಐಸಿಯುನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ನಿಕ್ಷಿತಾ ಕೂಡ ಗಾಯಗೊಂಡಿದ್ದಾಳೆ. ಆದರೆ ಆಕೆಯ ಸ್ಥಿತಿ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವೈದ್ಯರು ಇಬ್ಬರಿಗೂ ರೇಬೀಸ್‌ ತಡೆಗಟ್ಟುವ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ.

Exit mobile version