ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ. ಜಿಬಿಎ ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಲ್ಲಿ ಒಟ್ಟು 7020 ಆಸ್ತಿ ಮಾಲೀಕರು 437.37 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ತಿಗಳನ್ನು ಹರಾಜು ಮಾಡುವ ನಿರ್ಧಾರವನ್ನು ಪ್ರಾಧಿಕಾರ ಕೈಗೊಂಡಿದೆ.
ಜಿಬಿಎ ಅಧಿಕಾರಿಗಳ ಮಾಹಿತಿಯಂತೆ, ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಈಗಾಗಲೇ ಹಲವು ಬಾರಿ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ತೆರಿಗೆ ಪಾವತಿಗೆ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಸಹ ಬಹುತೇಕ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆ ಕಾನೂನು ಪ್ರಕ್ರಿಯೆಯ ಭಾಗವಾಗಿ ಮೊದಲು ಜಪ್ತಿ ಆದೇಶಗಳನ್ನು ಹೊರಡಿಸಲಾಗಿತ್ತು. ಆದರೆ ಜಪ್ತಿ ಆದೇಶದ ನಂತರವೂ ತೆರಿಗೆ ಪಾವತಿಸದ ಕಾರಣ, ಕೊನೆಯ ಹಂತದ ಕ್ರಮವಾಗಿ ಇದೀಗ ಆಸ್ತಿ ಹರಾಜಿಗೆ ದಿನಾಂಕ ನಿಗದಿ ಮಾಡಲಾಗಿದೆ.
ಪ್ರಾಧಿಕಾರದ ಪ್ರಕಟಣೆಯಂತೆ, ಫೆಬ್ರವರಿ 17ರಂದು ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಆಸ್ತಿಗಳನ್ನು ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನು ಚೌಕಟ್ಟಿನೊಳಗೆ ನಡೆಯಲಿದ್ದು, ತೆರಿಗೆ ಬಾಕಿ ಮೊತ್ತ ವಸೂಲಾತಿಯೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಿಬಿಎ ಸ್ಪಷ್ಟಪಡಿಸಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ವಾಣಿಜ್ಯ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಖಾಸಗಿ ಮನೆಗಳು ಹಾಗೂ ಖಾಲಿ ಜಾಗಗಳು ಸೇರಿದಂತೆ ವಿವಿಧ ವರ್ಗದ ಆಸ್ತಿಗಳು ತೆರಿಗೆ ಬಾಕಿಗೆ ಒಳಪಟ್ಟಿವೆ. ಕೆಲವು ಆಸ್ತಿ ಮಾಲೀಕರು ವರ್ಷಗಳಿಂದ ತೆರಿಗೆ ಪಾವತಿಸದೆ ಇದ್ದು, ಇದರಿಂದ ಪಾಲಿಕೆಗಳಿಗೆ ದೊಡ್ಡ ಪ್ರಮಾಣದ ಆದಾಯ ನಷ್ಟ ಉಂಟಾಗಿದೆ. ನಗರಾಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಾಜು ಸಂಬಂಧಿಸಿದ ಸಂಪೂರ್ಣ ಮಾಹಿತಿಯೊಂದಿಗೆ ನೋಟಿಸ್‌ಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿಯ ವಿವರಗಳನ್ನು ಪರಿಶೀಲಿಸಿ, ಬಾಕಿ ತೆರಿಗೆ ಮೊತ್ತವನ್ನು ತಿಳಿದುಕೊಳ್ಳಬಹುದು. ಹರಾಜು ದಿನಾಂಕಕ್ಕೂ ಮುನ್ನ ಆನ್‌ಲೈನ್ ಮೂಲಕ ಸಂಪೂರ್ಣ ತೆರಿಗೆ ಪಾವತಿಸಿದರೆ ಹರಾಜು ಪ್ರಕ್ರಿಯೆಯಿಂದ ಪಾರಾಗಲು ಅವಕಾಶ ಇದೆ ಎಂದು ಜಿಬಿಎ ತಿಳಿಸಿದೆ.
ನಗರದ ಆಸ್ತಿ ಮಾಲೀಕರಲ್ಲಿ ಈ ಬೆಳವಣಿಗೆ ಆತಂಕ ಮೂಡಿಸಿದ್ದು, ಹಲವರು ಈಗಾಗಲೇ ಆನ್‌ಲೈನ್ ಮೂಲಕ ತೆರಿಗೆ ಪಾವತಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ತೆರಿಗೆ ಪಾವತಿಯಲ್ಲಿ ವಿಳಂಬ ಮಾಡುವವರ ವಿರುದ್ಧ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಜಿಬಿಎ ನೀಡಿದೆ.
