ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ, ಇದೇ ಹೊತ್ತಿನಲ್ಲಿ ನಗರದಲ್ಲಿ ಅಪರಾಧ ಪ್ರಕರಣಗಳು, ಅದರಲ್ಲೂ ವಿಶೇಷವಾಗಿ ಮಾದಕ ವಸ್ತುಗಳ (Drugs) ಜಾಲ ವ್ಯಾಪಕವಾಗಿ ಹರಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಅಕ್ರಮ ಚಟುವಟಿಕೆಗಳಲ್ಲಿ ವಿದೇಶಿ ಪ್ರಜೆಗಳ ಕೈವಾಡ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು, ಈಗ ಮನೆ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಡ್ರಗ್ಸ್ ದಂಧೆ ಮತ್ತು ವಿದೇಶಿಗರ ಪಾಲೂದಾರಿಕೆ
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಈಶಾನ್ಯ ವಿಭಾಗ ಸೇರಿದಂತೆ ನಗರದ ವಿವಿಧೆಡೆ ನಡೆದ ದಾಳಿಗಳಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಬಂಧಿತರಾದವರಲ್ಲಿ ಬಹುಪಾಲು ವಿದೇಶಿ ಪ್ರಜೆಗಳೇ ಇದ್ದಾರೆ ಎಂಬುದು ಆಘಾತಕಾರಿ ಅಂಶ. ಶಿಕ್ಷಣದ ಹೆಸರಿನಲ್ಲಿ ಬರುವ ಕೆಲವರು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಇಲ್ಲೇ ಉಳಿದುಕೊಂಡು, ಮಾದಕ ವಸ್ತು ಮಾರಾಟದಂತಹ ಜಾಲದಲ್ಲಿ ಸಕ್ರಿಯರಾಗುತ್ತಿದ್ದಾರೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಪೊಲೀಸರು ಈಗ ಹೊಸ ನಿಯಮ ಜಾರಿಗೆ ತಂದಿದ್ದಾರೆ.
ಫಾರ್ಮ್-16 (Form-16) ಸಲ್ಲಿಕೆ ಕಡ್ಡಾಯ
ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಮತ್ತು ‘ಫಾರ್ಮ್-16’ ಸಲ್ಲಿಸುವುದು ಕಡ್ಡಾಯವಾಗಿದೆ. ಇದು ಕೇವಲ ನಿಯಮವಲ್ಲ, ಬದಲಾಗಿ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡಿರುವ ಅತ್ಯಗತ್ಯ ಕ್ರಮವಾಗಿದೆ.
ಮನೆ ಮಾಲೀಕರು ಪಾಲಿಸಬೇಕಾದ ನಿಯಮಗಳು:
-
ದಾಖಲೆಗಳ ಪರಿಶೀಲನೆ: ಬಾಡಿಗೆಗೆ ಬರುವ ವಿದೇಶಿ ಪ್ರಜೆಯ ಪಾಸ್‌ಪೋರ್ಟ್ ಮತ್ತು ವೀಸಾ ಅಸಲಿಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.
-
ಪೊಲೀಸ್ ಇನ್ಫರ್ಮೇಷನ್: ಮನೆ ನೀಡಿದ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಫಾರ್ಮ್-16 ಭರ್ತಿ ಮಾಡಬೇಕು.
-
ವೀಸಾ ಅವಧಿ: ಅವರ ವೀಸಾ ಅವಧಿ ಎಷ್ಟು ದಿನ ಇದೆ ಎಂಬುದರ ಮೇಲೆ ನಿಗಾ ಇರಲಿ. ಅವಧಿ ಮುಗಿದ ಮೇಲೂ ನೆಲೆಸಲು ಅವಕಾಶ ನೀಡಬಾರದು.
ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ
ಪೊಲೀಸರ ಈ ಸೂಚನೆಯನ್ನ ನಿರ್ಲಕ್ಷಿಸುವ ಮನೆ ಮಾಲೀಕರಿಗೆ ಕಠಿಣ ಕ್ರಮ ಜರುಗಿಸುವುದಾಗಿ ಅಧಿಕಾರಿಗಲು ತಿಳಿಸಿದ್ದಾರೆ. ವಿದೇಶಿ ಪ್ರಜೆಗಳು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದು ಕಂಡುಬಂದಲ್ಲಿ ಮತ್ತು ಮಾಲೀಕರು ಅವರ ಬಗ್ಗೆ ಮಾಹಿತಿ ನೀಡಿರದಿದ್ದಲ್ಲಿ, ಅಂತಹ ಮಾಲೀಕರನ್ನು ಸಹ ಅಪರಾಧದ ಭಾಗವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಈಶಾನ್ಯ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಬಾಡಿಗೆ ಆಸೆಗೆ ಬಿದ್ದು ಸೂಕ್ತ ದಾಖಲೆಗಳಿಲ್ಲದವರಿಗೆ ಮನೆ ನೀಡಿದರೆ ಕಾನೂನು ಕ್ರಮ ಖಚಿತ ಹೀಗಾಗಿ ಮನೆ ಮಾಲೀಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.





