ಬೆಂಗಳೂರು: ಪಶ್ಚಿಮ ಬಂಗಾಳದಲ್ಲಿ ಸರ್ಕಾರ ಬದಲಾದ ನಂತರ ಬಾಂಗ್ಲಾದೇಶದ ಅಕ್ರಮ ವಲಸಿಗರು ಬೆಂಗಳೂರಿಗೆ ಹೆಚ್ಚು ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇದೆ ಆದ್ದರಿಂದ ಬೆಂಗಳೂರು ಪೊಲೀಸ್ ಇಲಾಖೆ ತೀವ್ರ ಅಲರ್ಟ್‌ನಲ್ಲಿದೆ.
ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ಪೊಲೀಸ್ ಕಮಿಷನರ್ ಅವರು ಎಲ್ಲಾ ಜೋನ್ ಡಿಸಿಪಿಗಳಿಗೆ ವಿಶೇಷ ಸೂಚನೆ ನೀಡಿದ್ದಾರೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಪ್ರತಿ ಠಾಣೆಗೆ ಖಡಕ್ ನಿರ್ದೇಶನಗಳನ್ನು ಜಾರಿ ಮಾಡಲಾಗಿದೆ.
ಪ್ರಸ್ತುತ ಬೆಂಗಳೂರಿನ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬಾಂಗ್ಲಾ ಮೂಲದ ವಲಸಿಗರನ್ನು ಪತ್ತೆಹಚ್ಚುವ ಕಾರ್ಯ ತೀವ್ರವಾಗಿ ನಡೆಯುತ್ತಿದೆ. ಇದುವರೆಗೆ 240ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಪೊಲೀಸರು ಗುರುತಿಸಿ ವರದಿ ಮಾಡಿದ್ದಾರೆ. ಅವರಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಿ, ಕಾನೂನು ಕ್ರಮ ಕೈಗೊಂಡು ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪಶ್ಚಿಮ ಬಂಗಾಳದ ರಾಜಕೀಯ ಬದಲಾವಣೆಯ ನಂತರ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ವಲಸೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಈ ವಲಸಿಗರು ಆಶ್ರಯ ಪಡೆಯುವ ಸಾಧ್ಯತೆಯಿದೆ ಎಂದು ಮಾಹಿತಿ ತಿಳಿದುಬಂದಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಅವರು ಎಲ್ಲಾ ಸೀನಿಯರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈಲು ನಿಲ್ದಾಣ, ಬಸ್ ನಿಲ್ದಾಣ, ನಿವೇಶನ ಪ್ರದೇಶಗಳು, ಕಾಮಗಾರಿ ಸ್ಥಳಗಳು ಮತ್ತು ಬಾಡಿಗೆ ಮನೆಗಳಲ್ಲಿ ವಿಶೇಷ ನಿಗಾ ಇಡುವಂತೆ ಸೂಚಿಸಿದ್ದಾರೆ. ಅಕ್ರಮವಾಗಿ ತಂಗುವವರನ್ನು ಗುರುತಿಸಿ, ಅವರ ವಿವರಗಳನ್ನು ತಕ್ಷಣ ದಾಖಲಿಸುವಂತೆ ನಿರ್ದೇಶನ ನೀಡಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಹೇಳುವಂತೆ, “ಕೇವಲ ಬಾಂಗ್ಲಾದೇಶ ಮೂಲದವರು ಮಾತ್ರವಲ್ಲ, ಅವರು ಇಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ” ಎಂದಿದ್ದಾರೆ.
ಈ ಬಗ್ಗೆ ಸ್ಥಳೀಯ ಜನರು ಮತ್ತು ಮನೆ ಮಾಲೀಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಠಾಣೆಗೆ ಮಾಹಿತಿ ನೀಡುವಂತೆ ಕರೆ ನೀಡಲಾಗಿದೆ. ಅನುಮಾನಾಸ್ಪದವಾಗಿ ಯಾರೇ ಕಂಡು ಬಂದರೂ ಸಹ ಅವರನ್ನು ತಕ್ಷಣಕ್ಕೆ ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಹಾಗೇ ಅವರನ್ನು ವಿಚಾರಿಸಿ ತಕ್ಷಣ ಅವರನ್ನು ಅವರ ಮೂಲ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ.
