ಬೆಂಗಳೂರು: ರಾಜಧಾನಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರತರಾಗಿದ್ದ ವಾರ್ಡರ್ ಬಳಿ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿ ವಾರ್ಡರ್ ರಾಹುಲ್ ಪಾಟೀಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನ ಮಹಾದ್ವಾರದಲ್ಲಿ ನಿಯಮಿತ ತಪಾಸಣೆ ನಡೆಯುತ್ತಿತ್ತು. ಎಂದಿನಂತೆ ಕರ್ತವ್ಯಕ್ಕೆ ಬಂದಿದ್ದ ರಾಹುಲ್ ಪಾಟೀಲ್ ಅವರ ಚೀಲವನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಪರಿಶೀಲಿಸಿದಾಗ ಎರಡು ಗೋಲ್ಡ್ ಫ್ಲೇಕ್ ಕಿಂಗ್ ಸಿಗರೇಟ್ ಪ್ಯಾಕೆಟ್ ಹಾಗೂ ಅನುಮಾನಾಸ್ಪದ ತೇಳುವಾದ ಪೇಪರ್ ತರಹದ ನಿಷೇಧಿತ ವಸ್ತು ಪತ್ತೆಯಾಯಿತು. ತೂಕ ಮಾಡಿಸಿದಾಗ ಇದು ಸುಮಾರು 60 ಗ್ರಾಂ ಆಗಿದ್ದು, ಮಾದಕ ವಸ್ತುವಿನ ಶಂಕೆಯ ಮೇರೆಗೆ ತಕ್ಷಣವೇ ಜೈಲಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ವಸ್ತುವಿನ ಸ್ವರೂಪ ಹಾಗೂ ಅದರ ಜೈಲು ಒಳಗೆ ಸಾಗಾಟದ ಉದ್ದೇಶವೇನು ಎಂಬ ಪ್ರಶ್ನೆ ಮೂಡಿದೆ. ಜೈಲು ಒಳಗೆ ನಿಷೇಧಿತ ವಸ್ತುಗಳನ್ನು ತರುವುದೇ ಕಾನೂನು ಬಾಹಿರ, ಸಿಬ್ಬಂದಿ ಸ್ವತಃ ಇಂತಹ ಕ್ರಮ ಕೈಗೊಂಡಿರುವುದು ಇಲಾಖೆಗೆ ದೊಡ್ಡ ಹೊಡೆತವಾಗಿದೆ. ಈ ಸಂಬಂಧ ಜೈಲು ಅಧೀಕ್ಷಕ ಪರಮೇಶ್ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದರು. ದೂರು ಆಧರಿಸಿ ಪ್ರಕರಣವನ್ನು ದಾಖಲಿಸಿದ ಪೊಲೀಸರು ರಾಹುಲ್ ಪಾಟೀಲ್ ಅವರನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಸಿಬ್ಬಂದಿಯ ತ್ವರಿತ ಕ್ರಮ
ತಪಾಸಣೆ ನಡೆಸುತ್ತಿದ್ದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಪತ್ತೆಯಾದ ವಸ್ತುಗಳನ್ನು ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಕ್ರಮ ಕೈಗೊಂಡು ವಸ್ತುಗಳನ್ನು ವಶಪಡಿಸಿಕೊಂಡ ಜೈಲು ಆಡಳಿತವು ಯಾವುದೇ ರೀತಿಯ ತೊಡಕು ಉಂಟುಮಾಡದೆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿದೆ.
ರಾಹುಲ್ ಪಾಟೀಲ್ ಅವರು 2018ರಲ್ಲಿ ವಾರ್ಡರ್ ಆಗಿ ಕರ್ನಾಟಕ ಕಾರಾಗೃಹ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಆರಂಭದಲ್ಲಿ ಬೆಳಗಾವಿ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಡಿದ್ದರು. ಕಳೆದ ಕೆಲ ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡರ್ ಆಗಿದ್ದ ಅವರು ಇದೀಗ ಆರೋಪಿಯಾಗಿದ್ದಾರೆ.
