₹285ರ ಟ್ರಿಪ್‌ಗೆ ₹5,950 ಬಿಲ್ ! ಬೆಂಗಳೂರಲ್ಲಿ ಓಲಾ ಕ್ಯಾಬ್ ಡ್ರೈವರ್‌ಗಳ ಹೊಸ ಕಳ್ಳಾಟ ಬಯಲು

Untitled design 2026 03 19T180102.001

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರು ಪ್ರಯಾಣಿಕರನ್ನು ಸುಲಿಗೆ ಮಾಡಲು ದಿನಕ್ಕೊಂದು ಹೊಸ ದಾರಿ ಕಂಡುಕೊಳ್ಳುತ್ತಿದ್ದಾರೆ. ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳ ಮೇಲೆ ಅವಲಂಬಿತವಾಗಿರುವ ಜನಸಾಮಾನ್ಯರಿಗೆ ಈಗ ‘ಬಿಲ್ ಶಾಕ್’ ಎದುರಾಗಿದೆ. ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ₹285ರ ಬಾಡಿಗೆಗೆ ಬರೋಬ್ಬರಿ ₹5,950 ಪಾವತಿಸುವಂತೆ ಚಾಲಕ ಧಮಕಿ ಹಾಕಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ಹೊಸ ವಂಚನೆಯ ಜಾಲ ?

ಸಾಮಾನ್ಯವಾಗಿ ಓಲಾ ಅಥವಾ ಉಬರ್ ಆ್ಯಪ್‌ನಲ್ಲಿ ಟ್ರಿಪ್ ಬುಕ್ ಮಾಡಿದಾಗ ಅಂದಾಜು ದರ ಮೊದಲೇ ತಿಳಿಯುತ್ತದೆ. ಆದರೆ, ಈ ಪ್ರಕರಣದಲ್ಲಿ ಚಾಲಕ ತನ್ನ ವೈಯಕ್ತಿಕ ಫೋನ್‌ನಲ್ಲಿ ನಕಲಿ ಬಿಲ್ ಸೃಷ್ಟಿಸಿ ಪ್ರಯಾಣಿಕರನ್ನು ವಂಚಿಸಲು ಯತ್ನಿಸಿದ್ದಾನೆ. ಮೆಜೆಸ್ಟಿಕ್‌ನಿಂದ ಜಾಲಹಳ್ಳಿಗೆ ಹೋಗಲು ಆ್ಯಪ್‌ನಲ್ಲಿ ತೋರಿಸಿದ್ದು ಕೇವಲ ₹285. ಆದರೆ, ಡ್ರಾಪ್‌ ಪಾಯಿಂಟ್‌ಗೆ ತಲುಪಿದ ಕೂಡಲೇ ಚಾಲಕ ತನ್ನ ಫೋನ್ ತೆಗೆದು ಅದರಲ್ಲಿ ₹5,950 ಬಿಲ್ ತೋರಿಸಿ ಹಣಕ್ಕೆ ಪೀಡಿಸಿದ್ದಾನೆ.

ಪ್ರಯಾಣಿಕರು ಇದನ್ನು ಪ್ರಶ್ನಿಸಿದಾಗ, ನೀವು ಹಿಂದೆ ಕ್ಯಾನ್ಸಲ್ ಮಾಡಿದ್ದ ರೈಡ್‌ಗಳ ಬಾಕಿ ಹಣವಿದು, ಇದನ್ನು ಈಗಲೇ ಕಟ್ಟದಿದ್ದರೆ ನನ್ನ ಅಕೌಂಟ್‌ನಿಂದ ಹಣ ಕಟ್ ಆಗುತ್ತದೆ ಎಂದು ವಾದ ಮಾಡಿದದ್ದಾನೆ. ಪ್ರಯಾಣಿಕರು ತನ್ನ ಆ್ಯಪ್ ತೋರಿಸಲು ಮುಂದಾದಾಗ ಚಾಲಕ ಏರುಧ್ವನಿಯಲ್ಲಿ ರೇಗಾಡಿ, ಹಣ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ.

ದೂರು ನೀಡಿದ ಪ್ರಯಾಣಿಕರಿಗೆ ಕನ್ನಡ ಸರಿಯಾಗಿ ಬಾರದಿದ್ದನ್ನು ಬಂಡವಾಳ ಮಾಡಿಕೊಂಡ ಚಾಲಕ, ಕನ್ನಡದಲ್ಲೇ ಜೋರಾಗಿ ಮಾತನಾಡುತ್ತಾ ಪ್ರಯಾಣಿಕನಿಗೆ ಒತ್ತಡ ಹೇರಿದ್ದಾನೆ. ಕೂಡಲೇ ಸಹಾಯಕ್ಕಾಗಿ ಪ್ರಯಾಣಿಕ, ಓಲಾ ಆ್ಯಪ್‌ನ ‘ಎಮರ್ಜೆನ್ಸಿ ಸಪೋರ್ಟ್’ಗೆ ಕರೆ ಮಾಡಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಇದು ತುರ್ತು ಪರಿಸ್ಥಿತಿಯಲ್ಲ ಎಂದು ಉಡಾಫೆಯಿಂದ ಉತ್ತರಿಸಿ, ಸರಿಯಾದ ಸ್ಪಂದಿಸದೇ ಕರೆ ಕಟ್ ಮಾಡಿದ್ದಾರೆ ಎಂದು ಪ್ರಯಾಣಿಕರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕ್ಯಾಬ್ ಕಂಪನಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಂಪನಿಗೆ ಕರೆ ಮಾಡುವ ಬದಲು ತಕ್ಷಣ 112 (ಪೊಲೀಸ್ ಸಹಾಯವಾಣಿ) ಕರೆ ಮಾಡುವುದು ಉತ್ತಮ ಎಂದು ಹಲವರು ಸಲಹೆ ನೀಡಿದ್ದಾರೆ. ಕ್ಯಾಬ್ ಕಂಪನಿಗಳು ಹೆಚ್ಚೆಂದರೆ ಹಣ ರೀಫಂಡ್ ಮಾಡುತ್ತವೆ ಅಷ್ಟೇ, ಇಂತಹ ವಂಚಕ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಿಲ್ಲ ಎಂದು ಅನೇಕರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕೆಲವು ಬಳಕೆದಾರರು ಇಂತಹ ವಂಚನೆ ತಪ್ಪಿಸಲು ಐಡಿಯಾ ಒಂದನ್ನು ನೀಡಿದ್ದಾರೆ. ಆ್ಯಪ್‌ನಲ್ಲಿ ‘ಕ್ಯಾಶ್’ ಪೇಮೆಂಟ್ ಆಯ್ಕೆಯನ್ನು ತೆಗೆದುಹಾಕಿ, ಪ್ರಿಪೇಯ್ಡ್ ಅಥವಾ ಆನ್‌ಲೈನ್ ಪೇಮೆಂಟ್ ಮಾತ್ರ ಬಳಸಿ. ಇದರಿಂದ ಚಾಲಕರು ಹೆಚ್ಚುವರಿ ಹಣ ಕೇಳಲು ಅವಕಾಶವಿರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

Exit mobile version