ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ದಿನನಿತ್ಯ ಮೆಟ್ರೋ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುವಂತೆ QR ಕೋಡ್ ಆಧಾರಿತ ಅನ್‌ಲಿಮಿಟೆಡ್ ಮೆಟ್ರೋ ಪಾಸ್ ಸೇವೆಯನ್ನು ಆರಂಭಿಸಿದೆ. ಈ ಹೊಸ ಸೇವೆ ಜನವರಿ 15ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ಈವರೆಗೆ ನಮ್ಮ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣ ಪಾಸ್‌ಗಳು ಕೇವಲ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (CSC) ಮೂಲಕವೇ ಲಭ್ಯವಿದ್ದವು. ಆ ಪಾಸ್‌ಗಳನ್ನು ಪಡೆಯಲು ಪ್ರಯಾಣಿಕರು ₹50 ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಅಲ್ಲದೆ, ಕಾರ್ಡ್ ಪಡೆಯಲು ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಯೂ ಇತ್ತು. ಆದರೆ, ಹೊಸ ಮೊಬೈಲ್ QR ಕೋಡ್ ಪಾಸ್ ವ್ಯವಸ್ಥೆ ಈ ಎಲ್ಲಾ ಅಡಚಣೆಗಳಿಗೆ ಅಂತ್ಯ ಹಾಡಿದೆ.
ಮೊಬೈಲ್‌ನಲ್ಲೇ ಮೆಟ್ರೋ ಪಾಸ್
ಬಿಎಂಆರ್‌ಸಿಎಲ್ ಪರಿಚಯಿಸಿರುವ ಈ QR ಕೋಡ್ ಪಾಸ್‌ಗಳು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ನಲ್ಲೇ ಪಾಸ್ ಅನ್ನು ಹೊಂದಬಹುದು. ಯಾವುದೇ ಸ್ಮಾರ್ಟ್ ಕಾರ್ಡ್ ಅಥವಾ ಭೌತಿಕ ಪಾಸ್ ಅಗತ್ಯವಿಲ್ಲ. ಇದರೊಂದಿಗೆ ₹50 ಠೇವಣಿಯೂ ಸಂಪೂರ್ಣವಾಗಿ ರದ್ದುಗೊಂಡಿದೆ.
ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಮೆಟ್ರೋ ನಿಲ್ದಾಣಗಳಲ್ಲಿರುವ ಸ್ವಯಂಚಾಲಿತ ಸಂಗ್ರಹ (AFC) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಸುಲಭವಾಗಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು.
ಪಾಸ್ ಖರೀದಿ ಎಲ್ಲಲ್ಲಿ?
ಈ ಹೊಸ ಅನಿಯಮಿತ QR ಕೋಡ್ ಪಾಸ್‌ಗಳನ್ನು ‘ನಮ್ಮ ಮೆಟ್ರೋ’ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಖರೀದಿಸಬಹುದು. ಮುಂದಿನ ದಿನಗಳಲ್ಲಿ ಪೇಮೆಂಟ್ ಹಾಗೂ ಟ್ರಾನ್ಸ್‌ಪೋರ್ಟ್ ಸಂಬಂಧಿತ ಇತರೆ ಜನಪ್ರಿಯ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿಯೂ ಈ ಸೇವೆಯನ್ನು ಪರಿಚಯಿಸುವ ಯೋಜನೆ ಬಿಎಂಆರ್‌ಸಿಎಲ್‌ಗಿದೆ.
ಪಾಸ್ ದರಗಳ ವಿವರ
ಬಿಎಂಆರ್‌ಸಿಎಲ್ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಅವಧಿಯ ಪಾಸ್‌ಗಳನ್ನು ಪರಿಚಯಿಸಿದೆ.
-
1 ದಿನದ ಅನ್‌ಲಿಮಿಟೆಡ್ ಪಾಸ್ – ₹250
-
3 ದಿನಗಳ ಅನ್‌ಲಿಮಿಟೆಡ್ ಪಾಸ್ – ₹550
-
5 ದಿನಗಳ ಅನ್‌ಲಿಮಿಟೆಡ್ ಪಾಸ್ – ₹850
ಈ ಪಾಸ್‌ಗಳ ಮೂಲಕ ನಿಗದಿತ ಅವಧಿಯಲ್ಲಿ ಎಷ್ಟೇ ಬಾರಿ ಬೇಕಾದರೂ ಮೆಟ್ರೋ ಪ್ರಯಾಣ ಮಾಡಬಹುದು.
ಮೊಬೈಲ್ QR ಪಾಸ್ ವ್ಯವಸ್ಥೆ ಕಾಗದರಹಿತ ಸಂಚಾರವನ್ನು ಉತ್ತೇಜಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಕಾರಿ. ಜೊತೆಗೆ, ಡಿಜಿಟಲ್ ಪಾವತಿ, ವೇಗದ ಪ್ರವೇಶ ಮತ್ತು ಸಂಪರ್ಕರಹಿತ ತಂತ್ರಜ್ಞಾನದಿಂದ ಪ್ರಯಾಣಿಕರ ಅನುಭವ ಇನ್ನಷ್ಟು ಸುಗಮವಾಗಲಿದೆ.
