ಬೆಂಗಳೂರು, ಮೇ 17: ನಮ್ಮ ಮೆಟ್ರೋ ಸೇವೆಯಲ್ಲಿ ಮೇ 17ರಂದು ಭಾನುವಾರ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಕಟಣೆ ನೀಡಿದೆ. ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ಬೆಳಗ್ಗೆ ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ.
ಬಿಎಂಆರ್‌ಸಿಎಲ್ ನೀಡಿರುವ ಮಾಹಿತಿ ಪ್ರಕಾರ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣ (ಸೆಂಟ್ರಲ್ ಕಾಲೇಜ್) ನಡುವಿನ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೆಟ್ರೋ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ.
ಈ ಎರಡು ಗಂಟೆಗಳ ಅವಧಿಯಲ್ಲಿ ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ಮಾತ್ರ ಸೇವೆ ಲಭ್ಯವಿರುವುದಿಲ್ಲ. ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ ಉಳಿದ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಚಲ್ಲಘಟ್ಟ – ವಿಜಯನಗರ ಮಾರ್ಗದಲ್ಲಿ ರೈಲು ಸೇವೆ ಲಭ್ಯವಿರಲಿದೆ. ಅದೇ ರೀತಿ ಎಂ.ಜಿ. ರಸ್ತೆ – ವೈಟ್‌ಫೀಲ್ಡ್ (ಕಾಡುಗೋಡಿ) ಮಾರ್ಗದಲ್ಲೂ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಹಸಿರು ಮಾರ್ಗದಲ್ಲಿಯೂ ಮಾದಾವರ – ಸಿಲ್ಕ್ ಇನ್‌ಸ್ಟಿಟ್ಯೂಟ್ ಹಾಗೂ ಆರ್.ವಿ. ರಸ್ತೆ – ಬೊಮ್ಮಸಂದ್ರ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ನಿಯಮಿತವಾಗಿ ಓಡಲಿವೆ.
ಇದರಿಂದಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಭಾನುವಾರ ಬೆಳಗ್ಗೆ ಮೆಜೆಸ್ಟಿಕ್, ಸೆಂಟ್ರಲ್ ಕಾಲೇಜ್, ಕಬ್ಬನ್ ಪಾರ್ಕ್ ಮತ್ತು ಹೊಸಹಳ್ಳಿ ಭಾಗಗಳಿಗೆ ತೆರಳುವವರು ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಬಳಸುವಂತೆ ಸೂಚಿಸಲಾಗಿದೆ.
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ವಾರಾಂತ್ಯದಲ್ಲೂ ಸಾವಿರಾರು ಮಂದಿ ಮೆಟ್ರೋ ಸೇವೆಯನ್ನು ಅವಲಂಬಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನಿರ್ವಹಣಾ ಕಾಮಗಾರಿಗಳು ಅಗತ್ಯವಾಗಿರುವುದರಿಂದ ಕೆಲವೊಮ್ಮೆ ತಾತ್ಕಾಲಿಕ ವ್ಯತ್ಯಯ ಉಂಟಾಗುತ್ತದೆ. ಪ್ರಯಾಣಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಈ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋ ಸೇವೆ ಸ್ಥಗಿತಗೊಳ್ಳುವ ಅವಧಿ ಕೇವಲ ಎರಡು ಗಂಟೆಗಳಷ್ಟೇ ಆಗಿದ್ದು, ಬೆಳಗ್ಗೆ 9 ಗಂಟೆಯ ಬಳಿಕ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವಿನ ಸಂಚಾರ ಸೇರಿದಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳು ಮತ್ತೆ ಎಂದಿನಂತೆ ಆರಂಭಗೊಳ್ಳಲಿವೆ. ಹೀಗಾಗಿ ಪ್ರಯಾಣಿಕರು ಅನಗತ್ಯ ಗೊಂದಲಕ್ಕೆ ಒಳಗಾಗದೇ, ಸಮಯದ ಮಾಹಿತಿ ತಿಳಿದು ಪ್ರಯಾಣ ಮಾಡುವಂತೆ ಮನವಿ ಮಾಡಲಾಗಿದೆ.
