ಇವತ್ತಿನ ಟ್ರೆಂಡಿಂಗ್ ನ್ಯೂಸ್ ಅಂದ್ರೆ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರ ಮುದ್ದಿನ ಮಗಳ ಟ್ಯಾಟೂ ಕಹಾನಿ. ಹೌದು, ಸಾನ್ವಿ ಸುದೀಪ್ ಬೆನ್ನಿನ ಮೇಲೆ ಹಾಕಿಸಿಕೊಂಡಿರೋ ಆ ಒಂದು ಟ್ಯಾಟೂ ಈಗ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಪರ-ವಿರೋಧದ ಚರ್ಚೆಗಳ ನಡುವೆ ಚಕ್ರವರ್ತಿ ಚಂದ್ರಚೂಡ್ ಅವರು ಎಂಟ್ರಿ ಕೊಟ್ಟು ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಟ್ಯಾಟೂ ವಿವಾದ ಎಲ್ಲಿಯವರೆಗೆ ಹೋಗಿದೆ? ಇಲ್ಲಿದೆ ರಿಪೋರ್ಟ್.
- ಸಾನ್ವಿ ಟ್ಯಾಟೂ ಬಗ್ಗೆ ವಿವಾದ..ಭಕ್ತಿಯೋ..? ಫ್ಯಾಷನ್ನೋ..?
- ಟ್ರೋಲಿಗರಿಗೆ ಮಾರ್ಕ್ ಸ್ಟೈಲ್ ವಾರ್ನಿಂಗ್ ಕೊಟ್ಟ ಚಂದ್ರಚೂಡ್
- ಸಾನ್ವಿ ಪರವಾಗಿ ನಿಂತು ತಿರುಗೇಟು ನೀಡಿದ ಕಿಚ್ಚನ ಫ್ಯಾನ್ಸ್..!
- ಟ್ರೋಲ್‌ಗಳಿಗೆ ಡೋಂಟ್ ಕೇರ್ ಸಾನ್ವಿ ಸುದೀಪ್ ಆಟಿಟ್ಯೂಡ್
ಕಿಚ್ಚನ ಸುಪುತ್ರಿ ಸಾನ್ವಿ ಸುದೀಪ್ ಅವರು ಹೈದರಾಬಾದ್‌ನ ಖ್ಯಾತ ಸ್ಟುಡಿಯೋದಲ್ಲಿ ಸತತ 8 ಗಂಟೆಗಳ ಕಾಲ ಕುಳಿತು ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಮೆಚ್ಚುಗೆಯ ಮಹಾಪೂರವೇ ಹರಿಯಿತು. ಆದರೆ, ಇದರ ಬೆನ್ನಲ್ಲೇ ‘ಧರ್ಮ’ ಮತ್ತು ‘ಸಂಪ್ರದಾಯ’ದ ಹೆಸರಿನಲ್ಲಿ ಕೆಲವರು ಟ್ರೋಲ್ ಮಾಡಲು ಶುರು ಮಾಡಿದರು. “ದೇವರನ್ನು ಬೆನ್ನಿನ ಮೇಲೆ ಹಾಕಿಸಿಕೊಳ್ಳುವುದು ಎಷ್ಟು ಸರಿ?” ಎನ್ನುವ ಪ್ರಶ್ನೆಗಳು ಎದ್ದವು. ಆದರೆ ಸಾನ್ವಿ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ತನ್ನ ಬೆನ್ನಿನ ಮೇಲೆ ಮೂಡಿಬಂದ ಕಲಾಕೃತಿಗೆ ಮನಸೋತಿದ್ದಾರೆ.
ಈ ವಿವಾದಕ್ಕೆ ಈಗ ಪತ್ರಕರ್ತ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ಟ್ವಿಸ್ಟ್ ನೀಡಿದ್ದಾರೆ. ಸಾನ್ವಿ ಪರವಾಗಿ ಗುಡುಗಿರುವ ಅವರು, ಆಕೆಯ ದೇಹ, ಆಕೆಯ ದೇವರು.. ಕೇಳಲು ನೀನ್ಯಾರು? ಎಂದು ನೇರವಾಗಿಯೇ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಸಂಸ್ಕೃತಿಯಲ್ಲಿ ಅಂತರಂಗದ ಭಕ್ತಿಯ ಬಗ್ಗೆ ಉದಾಹರಣೆ ನೀಡಿರುವ ಅವರು, ಶಕ್ತಿಪೀಠಗಳ ಉದಾಹರಣೆ ಕೊಟ್ಟು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಸುಹಾನಾ ಸೈಯದ್ ಮತ್ತು ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಚಂದ್ರಚೂಡ್ ಅವರ ಈ ನಿಲುವಿಗೆ ಬೆಂಬಲ ಸೂಚಿಸಿದ್ದು, ಈ ವಿಚಾರ ಈಗ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಭಕ್ತಿಯ ನಡುವಿನ ಚರ್ಚೆಯಾಗಿ ಮಾರ್ಪಟ್ಟಿದೆ.
ಕೇವಲ ಸ್ಟಾರ್ ಕಿಡ್ ಆಗಿ ಉಳಿಯದೆ, ಸಾನ್ವಿ ಈಗಾಗಲೇ ‘ಮಸ್ತ್ ಮಲೈಕಾ’ ಅಂತಹ ಹಿಟ್ ಹಾಡುಗಳ ಮೂಲಕ 50 ಮಿಲಿಯನ್ ವೀವ್ಸ್ ಸಾಧಿಸಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಟ್ರೋಲ್‌ಗಳು ಸಾನ್ವಿಗೆ ಹೊಸದೇನಲ್ಲ, ಹಿಂದೆ ಕೂಡ ಹಲವು ಬಾರಿ ಅಪ್ರಸ್ತುತ ಟೀಕೆಗಳನ್ನು ಅವರು ಸಲೀಸಾಗಿ ಎದುರಿಸಿದ್ದಾರೆ. ಈ ಟ್ಯಾಟೂ ವಿವಾದ ಸಾನ್ವಿ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿದೆಯೇ ಹೊರತು ಕುಗ್ಗಿಸಿಲ್ಲ ಎನ್ನುವುದು ಅಭಿಮಾನಿಗಳ ಅಭಿಪ್ರಾಯ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
