ಬೆಂಗಳೂರು, ಡಿಸೆಂಬರ್ 11: ಬೆಂಗಳೂರಿನ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಈ ಬಾರಿ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ಮುಂಚಿತವಾಗಿ ಭರ್ಜರಿ ಉಡುಗೊರೆ ನೀಡಿದೆ. ಹಳದಿ ಮಾರ್ಗದ (Yellow Line-ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರ) ಆರನೇಯ ಆರು-ಬೋಗಿ ರೈಲು ಡಿಸೆಂಬರ್ 22ರಿಂದ ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ. ಇದರಿಂದ ಪೀಕ್ ಅವರ್‌ಗಳಲ್ಲಿ 15-12 ನಿಮಿಷಕೊಮ್ಮೆ ರೈಲು ಸಿಗಲಿದೆ.
ನವೆಂಬರ್ ಕೊನೆಯ ವಾರದಲ್ಲಿ ಆರನೇ ರೈಲಿನ ಸೆಟ್ ಅನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿತ್ತು. ಈ ರೈಲನ್ನು ಕೋಲ್ಕತ್ತಾದ ಬಳಿಯಿರುವ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ತಯಾರಿಸಿದೆ. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಜತೆಗಿನ ಒಪ್ಪಂದದಡಿ ಒಟ್ಟು 36 ರೈಲು ಸೆಟ್‌ಗಳನ್ನು ₹1,578 ಕೋಟಿ ವೆಚ್ಚದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಈ ಒಪ್ಪಂದದಲ್ಲಿ ಈಗಾಗಲೇ ಐದು ರೈಲುಗಳು ಸೇವೆಯಲ್ಲಿವೆ.
ಈ ಆರನೇ ರೈಲು ಸಂಚಾರ ಸೇವೆ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ 750 ಕಿಲೋಮೀಟರ್ ಪರೀಕ್ಷಾ ಸಂಚಾರ ಮತ್ತು ಸಿಗ್ನಲಿಂಗ್ ಇಂಟರ್‌ಫೇಸ್ ಟೆಸ್ಟ್‌ಗಳನ್ನು ಪೂರ್ಣಗೊಳಿಸಬೇಕಿದೆ. ಈ ಪ್ರಕ್ರಿಯೆ ತೀವ್ರವಾಗಿ ನಡೆಯುತ್ತಿದ್ದು, ಕ್ರಿಸ್‌ಮಸ್‌ಗೆ ಮುಂಚಿತವಾಗಿ ಡಿಸೆಂಬರ್ 22ರಂದು ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಹಳದಿ ಲೈನ್‌ನಲ್ಲಿ ಪೀಕ್ ಅವರ್ ಆವರ್ತನವನ್ನು 12 ನಿಮಿಷಕ್ಕೆ ತರಲಾಗುತ್ತಿದ್ದರೂ, ಸಂಚಾರ ಆರಂಭದ ಸಮಯದಲ್ಲಿ ಬದಲಾವಣೆಯ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಪ್ರಸ್ತುತ ಹಳದಿ ಲೈನ್, ಬೆಳಗ್ಗೆ 6 ಗಂಟೆಗೆ ಸಂಚಾರ ಆರಂಭಿಸುತ್ತದೆ. ನಮ್ಮ ಮೆಟ್ರೋದ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳು ಬೆಳಗ್ಗೆ 5 ಗಂಟೆಗೇ ಆರಂಭವಾಗುತ್ತವೆ. ಆದರೆ ಹಳದಿ ಲೈನ್‌ಗೆ ಇನ್ನೂ ಬೆಳಗ್ಗೆ 5 ಗಂಟೆ ಸೇವೆ ಆರಂಭಿಸುವ ಯೋಜನೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 11, 2025ರಿಂದ, 19.15 ಕಿ.ಮೀ. ಉದ್ದದ ಆರ್‌ವಿ ರೋಡ್-ಬೊಮ್ಮಸಂದ್ರ ಹಳದಿ ಮಾರ್ಗವು ನಮ್ಮ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು 10 ಲಕ್ಷ ದಾಟಿಸಿದೆ. ಆದರೆ ಆರಂಭದಲ್ಲಿ ಕೇವಲ 5 ರೈಲುಗಳೊಂದಿಗೆ ಸೇವೆ ಆರಂಭವಾದ ಕಾರಣ ಪೀಕ್ ಅವರ್‌ಗಳಲ್ಲಿ 15 ನಿಮಿಷಕ್ಕೊಮ್ಮೆ ರೈಲು ಮತ್ತು ಬೆಳಗ್ಗೆ 6 ಗಂಟೆಗೆ ಮಾತ್ರ ಸೇವೆ ಆರಂಭವಾಗುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿತ್ತು. ಆದರೆ ಆರನೇ ರೈಲು ಸೇರ್ಪಡೆಯಿಂದ ಈ ತೊಂದರೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ.
ಹೆಚ್ಚಿನ ರೈಲುಗಳು ಸೇರ್ಪಡೆಯಾಗುತ್ತಿದ್ದಂತೆ 2026ರ ಮೊದಲ ತ್ರೈಮಾಸಿಕದಲ್ಲಿ ಪೀಕ್ ಅವರ್ ಆವರ್ತನವನ್ನು 8-10 ನಿಮಿಷಕ್ಕೆ ತರುವ ಯೋಜನೆಯೂ ಇದೆ. ಇದಲ್ಲದೆ ಬೆಳಗ್ಗೆ 5 ಗಂಟೆ ಸೇವೆ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.
