ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಆರೆಂಜ್ ಲೈನ್ ಮೆಟ್ರೋ ಯೋಜನೆಗೆ ಟೆಂಡರ್ ಕರೆದ BMRCL

Untitled design 2026 01 13T114420.463

ಬೆಂಗಳೂರು ನಗರದ ದಕ್ಷಿಣ ಹಾಗೂ ಪಶ್ಚಿಮ ಭಾಗದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜೆಪಿ ನಗರ, ಹೊಸಕೆರೆಹಳ್ಳಿ, ನಾಗರಭಾವಿ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಆರೆಂಜ್ ಲೈನ್ ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಸಿವಿಲ್ ಟೆಂಡರ್ ಆಹ್ವಾನಿಸಿದೆ. ಇದರಿಂದ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಅಧಿಕೃತ ಚಾಲನೆ ಸಿಗುವ ನಿರೀಕ್ಷೆ ಮೂಡಿದೆ.

ಬಿಎಂಆರ್ಸಿಎಲ್ ಹೊರಡಿಸಿರುವ ಅಧಿಕೃತ ಪ್ರಕಟಣೆಯಂತೆ, ಜೆಪಿ ನಗರ 4ನೇ ಹಂತದಿಂದ ನಾಗರಭಾವಿವರೆಗಿನ ಮೆಟ್ರೋ ಮಾರ್ಗಕ್ಕೆ ಮೂರು ಪ್ಯಾಕೇಜ್‌ಗಳಲ್ಲಿ ಸಿವಿಲ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಕೆಗೆ ಫೆಬ್ರವರಿ 20ರಿಂದ ಫೆಬ್ರವರಿ 25ರವರೆಗೆ ಅವಕಾಶ ನೀಡಲಾಗಿದೆ. ಪ್ರತಿ ಪ್ಯಾಕೇಜ್‌ಗೂ ಪ್ರತ್ಯೇಕ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.

ಪ್ಯಾಕೇಜ್–1: ಜೆಪಿ ನಗರದಿಂದ ಕಾಮಾಕ್ಯವರೆಗೆ

ಮೊದಲ ಪ್ಯಾಕೇಜ್‌ನಲ್ಲಿ ಜೆಪಿ ನಗರ 4ನೇ ಹಂತದಿಂದ ಕಾಮಾಕ್ಯ ಜಂಕ್ಷನ್‌ವರೆಗೆ ಮೆಟ್ರೋ ಕಾಮಗಾರಿ ನಡೆಯಲಿದೆ. ಈ ಪ್ಯಾಕೇಜ್‌ನಲ್ಲಿ ಡಬಲ್ ಡೆಕ್ಕರ್ ಮೆಟ್ರೋ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ಜೊತೆಗೆ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವು ಕಾರ್ಯವೂ ಸೇರಿದೆ. ಈ ಮಾರ್ಗದಲ್ಲಿ ಒಟ್ಟು 4 ಮೆಟ್ರೋ ನಿಲ್ದಾಣಗಳು ನಿರ್ಮಾಣವಾಗಲಿವೆ.

ಈ ಪ್ಯಾಕೇಜ್‌ಗೆ ₹1,375 ಕೋಟಿ ವೆಚ್ಚವನ್ನು ಬಿಎಂಆರ್ಸಿಎಲ್ ನಿಗದಿಪಡಿಸಿದೆ.

ಪ್ಯಾಕೇಜ್–2: ಹೊಸಕೆರೆಹಳ್ಳಿ–ನಾಗರಭಾವಿ ಸರ್ಕಲ್

ಎರಡನೇ ಪ್ಯಾಕೇಜ್‌ನಲ್ಲಿ ಹೊಸಕೆರೆಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದೂ ಕೂಡ ಡಬಲ್ ಡೆಕ್ಕರ್ ವ್ಯವಸ್ಥೆಯಲ್ಲೇ ರೂಪುಗೊಳ್ಳಲಿದೆ. ಈ ಭಾಗದಲ್ಲಿ ನಿರ್ಮಾಣವಾಗುವ 4 ನಿಲ್ದಾಣಗಳು ಹೀಗಿವೆ.

ಈ ಪ್ಯಾಕೇಜ್‌ಗೆ ₹1,396 ಕೋಟಿ ಬಜೆಟ್ ಮೀಸಲಿಡಲಾಗಿದೆ. ಪಶ್ಚಿಮ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಈ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ.

ಪ್ಯಾಕೇಜ್–3: ಎರಡು ಕಾರಿಡಾರ್‌ಗಳ ಅಭಿವೃದ್ಧಿ

ಮೂರನೇ ಪ್ಯಾಕೇಜ್ ಅನ್ನು ಎರಡು ಕಾರಿಡಾರ್‌ಗಳಾಗಿ ವಿಭಜಿಸಲಾಗಿದೆ.

ಕಾರಿಡಾರ್–1
ವಿನಾಯಕ ಲೇಔಟ್‌ನಿಂದ ನಾಗರಭಾವಿ ಬಡಾವಣೆ ಕಾಂಪ್ಲೆಕ್ಸ್‌ವರೆಗೆ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಒಟ್ಟು 3 ನಿಲ್ದಾಣಗಳು ಇರಲಿವೆ.

ಕಾರಿಡಾರ್–2:
ಸುಂಕದಕಟ್ಟೆ ನಿಲ್ದಾಣ ನಿರ್ಮಾಣದ ಜೊತೆಗೆ ಸುಂಕದಕಟ್ಟೆ ಡಿಪೋ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳ ಕಾಮಗಾರಿ ಈ ಪ್ಯಾಕೇಜ್‌ನಲ್ಲಿ ಸೇರಿದೆ. ಈ ಸಂಪೂರ್ಣ ಪ್ಯಾಕೇಜ್‌ಗೆ ₹1,415 ಕೋಟಿ ವೆಚ್ಚವನ್ನು ನಿಗದಿಪಡಿಸಲಾಗಿದೆ.

ಆರೆಂಜ್ ಲೈನ್ ಮೆಟ್ರೋ ಯೋಜನೆ ಪೂರ್ಣಗೊಂಡರೆ, ದಕ್ಷಿಣ ಹಾಗೂ ಪಶ್ಚಿಮ ಬೆಂಗಳೂರಿನ ಜನರಿಗೆ ವೇಗದ, ಸುರಕ್ಷಿತ ಮತ್ತು ಸುಲಭ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ. ರಸ್ತೆ ಮೇಲಿನ ವಾಹನ ದಟ್ಟಣೆ, ಸಮಯ ವ್ಯರ್ಥ ಹಾಗೂ ಇಂಧನ ಬಳಕೆ ಕಡಿಮೆಯಾಗುವ ನಿರೀಕ್ಷೆಯಿದೆ.

Exit mobile version