ಶಿವಮೊಗ್ಗದಲ್ಲಿ ಎರಡನೇ ಮದುವೆಗೆ ಒಪ್ಪದ ಹೆಂಡತಿ ಕತ್ತು ಹಿಸುಕಿ ಕೊಂದ ಗಂಡ

BeFunky collage 2026 01 13T171540.543

ಪ್ರೀತಿಸಿ ಅಪಹರಿಸಿ ಮದುವೆಯಾಗಿದ್ದ ಪತ್ನಿಯನ್ನೇ ಎರಡನೇ ಮದುವೆಗೆ ಒಪ್ಪದ ಕಾರಣದಿಂದ ಕ್ರೂರವಾಗಿ ಕೊಂದ ಭಯಾನಕ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ನಡೆದಿದೆ. ‘ನಿನ್ನ ಬಿಟ್ಟರೆ ನನಗ್ಯಾರೂ ಇಲ್ಲ’ ಎಂದು ಬೆನ್ನು ಬಿದ್ದು ಮದುವೆಯಾಗಿದ್ದ ಗೋಪಿ (28) ಎಂಬಾತ ತನ್ನ ಪತ್ನಿ ಚಂದನಬಾಯಿ (23) ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ವ್ಯಾಮೋಹ ಮತ್ತು ಎರಡನೇ ಮದುವೆಯ ಆಸೆಗೆ ಬಿದ್ದ ಗೋಪಿ ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾನೆ.

ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನ ನಿವಾಸಿ ಗೋಪಿ ವೃತ್ತಿಯಲ್ಲಿ ಅಡಿಕೆ ಕೊಯ್ಲು ಮೇಸ್ತ್ರಿ. ಡಿ.ಬಿ. ಹಳ್ಳಿಯ ಚಂದನಬಾಯಿಯನ್ನು ಎಸ್.ಎಸ್.ಎಲ್.ಸಿ ಓದುತ್ತಿದ್ದಾಗಿನಿಂದ ಪ್ರೀತಿಸುತ್ತಿದ್ದ. ಜಾತಿ ಭೇದದಿಂದ ಕುಟುಂಬಗಳು ವಿರೋಧಿಸಿದರೂ, ಚಂದನಬಾಯಿಗೆ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ ಗೋಪಿ ಹಠ ಬಿಡದೆ ಸಿನಿಮಾ ಸ್ಟೈಲ್‌ನಲ್ಲಿ ಆಕೆಯನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದ.

6 ವರ್ಷಗಳ ಸುಂದರ ಸಂಸಾರ, ಇಬ್ಬರು ಮಕ್ಕಳಿದ್ದರೂ ಗೋಪಿ ಹಾದಿ ತಪ್ಪಿದ. ಕ್ಲಬ್‌ಗೆ ಹೋಗುವ ಅಭ್ಯಾಸ, ಪರಸ್ತ್ರೀ ಸಂಬಂಧಗಳು, ಯುವತಿಯರ ಹೆಸರನ್ನು ಮೈಮೇಲೆ ಟ್ಯಾಟೂ ಹಚ್ಚಿಸಿಕೊಳ್ಳುವ ಹುಚ್ಚುತನ, ಇವೆಲ್ಲವನ್ನೂ ಪ್ರಶ್ನಿಸಿದಾಗ ದಂಪತಿಗಳ ನಡುವೆ ಜಗಳ ಶುರುವಾಗುತ್ತಿತ್ತು. “ಎರಡನೇ ಮದುವೆ ಮಾಡಿಕೊಳ್ಳುತ್ತೇನೆ, ನೀನು ಒಪ್ಪಿಗೆ ನೀಡು” ಎಂದು ಗೋಪಿ ನಿರಂತರವಾಗಿ ಪೀಡಿಸುತ್ತಿದ್ದ.

ಕಳೆದ ಭಾನುವಾರ ಸಂಜೆ ಗೋಪಿ ತನ್ನ ಕ್ರೌರ್ಯ ಮೆರೆದ. “ಮಾತನಾಡಬೇಕು” ಎಂದು ನೆಪ ಹೇಳಿ ಮನೆಯಲ್ಲಿದ್ದ ಚಂದನಬಾಯಿಯ ತಂಗಿ ಮತ್ತು ಇಬ್ಬರು ಮಕ್ಕಳನ್ನು ಬಲವಂತವಾಗಿ ಹೊರಗೆ ಕಳುಹಿಸಿದ. ಮನೆಯಲ್ಲಿ ಏಕಾಂತ  ಬಂದ ಗೋಪಿ ಮತ್ತೆ ಮದುವೆಯ ವಿಚಾರ ಎತ್ತಿ ಜಗಳ ತೆಗೆದ. ಚಂದನಬಾಯಿ ನಿರಾಕರಿಸಿದಾಗ ಸಿಟ್ಟಿಗೆದ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ. ಕೃತ್ಯ ನಡೆದ ಬಳಿಕ ಏನೂ ತಿಳಿಯದವನಂತೆ ನಾಟಕವಾಡಿದ್ದ.

ಹೊಳೆಹೊನ್ನೂರು ಪೊಲೀಸರು ತೀಕ್ಷ್ಣ ವಿಚಾರಣೆ ನಡೆಸಿದಾಗ ಗೋಪಿ ಸತ್ಯ ಒಪ್ಪಿಕೊಂಡಿದ್ದಾನೆ. ಈತ ಹಿಂದೆ ಪೋಕ್ಸೋ ಕೇಸ್‌ನಲ್ಲಿ ಜೈಲು ವಾಸ ಅನುಭವಿಸಿದ್ದ. ಈಗ ಮತ್ತೊಮ್ಮೆ ಜೈಲು ಪಾಲಾಗಿದ್ದಾನೆ.

ಚಂದನಬಾಯಿಯ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದು, ತಬ್ಬಲಿಗಳಾದ ಇಬ್ಬರು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಪ್ರೀತಿಯ ಹೆಸರಿನಲ್ಲಿ ನಡೆದ ಈ ಕ್ರೌರ್ಯ ಎಲ್ಲರನ್ನೂ ಕಂಗಾಲು ಮಾಡಿದೆ.

Exit mobile version