ಬೆಂಗಳೂರು: ಸಿಲಿಕಾನ್ ಸಿಟಿಯ ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಮತ್ತು ಇಂದಿರಾನಗರದಂತಹ ಪ್ರದೇಶಗಳಲ್ಲಿ ಹೊಸ ವರ್ಷದ ಅಬ್ಬರ ಶುರುವಾಗಿದೆ. ಪಬ್ ಮತ್ತು ಕ್ಲಬ್‌ಗಳಲ್ಲಿ ಜನಸಾಗರವೇ ಹರಿದುಬರುತ್ತಿದೆ. ಈ ಸಂಭ್ರಮದ ನಡುವೆಯೇ ಮಾದಕ ವ್ಯಸನಿಗಳಿಗೆ ಡ್ರಗ್ಸ್ ಸಪ್ಲೈ ಮಾಡಲು ಯತ್ನಿಸಿದ್ದ ಅಂತರಾಷ್ಟ್ರೀಯ ಜಾಲಗಳನ್ನು ಪೊಲೀಸರು ಭೇದಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಒಬ್ಬ ಸಿಕ್ಕಿಬಿದ್ದಿದ್ದಾನೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಗೇಟ್ (Airport Back Gate) ಬಳಿ ಗುಟ್ಟಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತನಿಂದ 21 ಗ್ರಾಂ ಕೊಕೇನ್ ಹಾಗೂ 30 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಈತ ಈ ಹಿಂದೆಯೂ ನಗರದ ವಿವಿಧೆಡೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎನ್ನಲಾಗಿದ್ದು, ಹೊಸ ವರ್ಷದ ಪಾರ್ಟಿಗಳಿಗಾಗಿಯೇ ಈ ಬಾರಿ ಭಾರಿ ತಯಾರಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿದ್ದ ಡ್ರಗ್ ಫ್ಯಾಕ್ಟರಿ ಪತ್ತೆ
ಇನ್ನೊಂದು ಆಘಾತಕಾರಿ ಬೆಳವಣಿಗೆಯಲ್ಲಿ, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಭೂಗತ ಡ್ರಗ್ ಫ್ಯಾಕ್ಟರಿಯೊಂದನ್ನು ಪತ್ತೆ ಹಚ್ಚಿದ್ದಾರೆ. ಕೇವಲ 8 ಕಿ.ಮೀ ವ್ಯಾಪ್ತಿಯಲ್ಲಿ ಇಡೀ ಭಾರತಕ್ಕೆ ಡ್ರಗ್ಸ್ ಪೂರೈಸುವ ಆಲ್ ಇಂಡಿಯಾ ಪ್ಲಾನ್ ಮಾಡಲಾಗಿತ್ತು. ಈ ದಂಧೆಯಲ್ಲಿ ಪೊಲೀಸರ ಪಾತ್ರವಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಕರ್ತವ್ಯ ಲೋಪದ ಆರೋಪದ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳ ಮೂವರು ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.
ಎನ್‌ಸಿಬಿಯಿಂದ 8 ಕೋಟಿ ಮೌಲ್ಯದ ‘ಖಾಟ್’ ಎಲೆಗಳ ವಶ
ಅತ್ತ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಕೂಡ ಅಂತರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸಿದೆ. ಬೆಂಗಳೂರಿನ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 160 ಕೆ.ಜಿ ತೂಕದ ‘ಖಾಟ್’ (Khat) ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 8 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2018ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಇದನ್ನು ಮಾದಕ ವಸ್ತು ಎಂದು ಘೋಷಿಸಿದ ನಂತರ, ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಟ್ ಎಲೆಗಳನ್ನು ರಾಜ್ಯದಲ್ಲಿ ವಶಪಡಿಸಿಕೊಂಡಿರುವುದು ಇದೇ ಮೊದಲು.
ಒಟ್ಟಾರೆಯಾಗಿ, ಹೊಸ ವರ್ಷದ ಪಾರ್ಟಿಗಳಲ್ಲಿ ಮಾದಕ ದ್ರವ್ಯಗಳ ಅಟ್ಟಹಾಸ ತಡೆಯಲು ನಗರಾದ್ಯಂತ ಪೊಲೀಸರ ವಿಶೇಷ ತಂಡಗಳು ಹದ್ದಿನ ಕಣ್ಣಿಟ್ಟಿವೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
