ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರು ದಸರೆಯ ಸಡಗರದಲ್ಲಿ ಮಿಂದೇಳುತ್ತಿದ್ದು, ಇಂದಿನಿಂದ ಬಹುನಿರೀಕ್ಷಿತ ಯುವದಸರಾ ಕಾರ್ಯಕ್ರಮ ಆರಂಭವಾಗಲಿದೆ. ಯುವಜನತೆಯನ್ನು ಸಂಗೀತ ಮತ್ತು ನೃತ್ಯದ ಮೂಲಕ ರಂಜಿಸಲು ವೇದಿಕೆ ಸಜ್ಜಾಗಿದೆ. ಖ್ಯಾತ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರು ಯುವದಸರಾ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಐದು ದಿನಗಳ ಕಾಲ ಸಂಗೀತ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಐದು ದಿನಗಳ ಯುವದಸರಾ ಸಂಭ್ರಮ
ಮೈಸೂರು ನಗರದ ಹೊರವಲಯದಲ್ಲಿರುವ ಉತ್ತನಹಳ್ಳಿ ಸಮೀಪ ಯುವದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಲಕ್ಷಾಂತರ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಆಯೋಜಕರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಯುವದಸರಾ ಮೊದಲ ದಿನ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ರಸಸಂಜೆ ಪ್ರೇಕ್ಷಕರನ್ನು ರಂಜಿಸಲಿದೆ. ಎರಡನೇ ದಿನ ಖ್ಯಾತ ಸಂಗೀತ ನಿರ್ದೇಶಕರಾದ ಶಂಕರ್ ಮಹದೇವನ್, ಎಹ್ಸಾನ್ ಮತ್ತು ಲಾಯ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮೂರನೇ ದಿನ ಯುವಜನತೆಯ ನೆಚ್ಚಿನ ಗಾಯಕ ಸಿದ್ ಶ್ರೀರಾಮ್ ತಮ್ಮ ಗಾಯನದ ಮೂಲಕ ಸಂಗೀತದ ಮೋಡಿ ಮಾಡಲಿದ್ದಾರೆ. ನಾಲ್ಕನೇ ದಿನ ಸ್ಯಾಂಡಲ್‌ವುಡ್ ಕಲಾವಿದರ ಸಂಗೀತ ಕಾರ್ಯಕ್ರಮದ ಜೊತೆಗೆ ಗಾಯಕ ವಿಜಯ ಪ್ರಕಾಶ್, ನಟ ಶಿವರಾಜ್‌ಕುಮಾರ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಭಾಗವಹಿಸಲಿದ್ದಾರೆ. ಕೊನೆಯ ದಿನ ಖ್ಯಾತ ಗಾಯಕಿ ಜಾಸ್ಮಿನ್ ಸೇರಿದಂತೆ ಹಲವು ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ
ಮೈಸೂರು ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರಜಾಪ್ರಭುತ್ವದ ಹಬ್ಬದ ಪರಿಕಲ್ಪನೆಯಲ್ಲಿ ಹೂವುಗಳಿಂದಲೇ ವಿಧಾನಸೌಧದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ವಿವಿಧ ಬಗೆಯ ಹೂವಿನ ಅಲಂಕಾರಗಳು, ಕಲಾತ್ಮಕ ವಿನ್ಯಾಸಗಳು ಮತ್ತು ಬಣ್ಣಬಣ್ಣದ ಪುಷ್ಪಗಳು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಿವೆ.
ಶ್ರೀರಂಗಪಟ್ಟಣದಲ್ಲೂ ದಸರಾ ಸಂಭ್ರಮ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಯುವ ಸಂಭ್ರಮಕ್ಕೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಿದ್ದಾರೆ. ತಾಲೂಕು ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ದಸರಾ ವೈಭವ
ನಾಡಹಬ್ಬದ ಸಂಭ್ರಮ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ವ್ಯಾಪಿಸಿದೆ. ನಾದಬ್ರಹ್ಮ ಹಂಸಲೇಖ ಅವರು ದಸರಾ ಆಚರಣೆಗೆ ಚಾಲನೆ ನೀಡಿದ್ದು, ಪಟ್ಟದ ಗೊಂಬೆಗಳ ಪೂಜೆ, ಮೈಸೂರು ಅರಮನೆಯ ವೈಭವ ಸಾರುವ ಗೊಂಬೆಗಳ ಪ್ರದರ್ಶನ ಮತ್ತು ಡೊಳ್ಳು ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.
ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಆರು ದಿನಗಳ ಕಾಲ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
