ಬಾಡಿಗೆ ಮನೆ ಹುಡುಕುವವರಿಗೆ ಎಚ್ಚರ! ಐಷಾರಾಮಿ ಫ್ಲಾಟ್ ಆಸೆ ತೋರಿಸಿ ಹಣ ಪೀಕ್ತಾರೆ ಸೈಬರ್‌ ಖದೀಮರು

Untitled design 2026 02 18T134703.062

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು ದೊಡ್ಡ ಸಾಹಸ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಈಗ ಹೊಸ ರೂಪದಲ್ಲಿ ಸಾರ್ವಜನಿಕರನ್ನು ಲೂಟಿ ಮಾಡುತ್ತಿದ್ದಾರೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಐಷಾರಾಮಿ ಮನೆಗಳ ಆಮಿಷ ಒಡ್ಡಿ, ಹಣ ಪೀಕುವ ದೊಡ್ಡ ಜಾಲವೊಂದು ನಗರದಲ್ಲಿ ಸಕ್ರಿಯವಾಗಿದೆ. ಇತ್ತೀಚೆಗೆ ಬೆಂಗಳೂರಿನ ವೈದ್ಯೆಯೊಬ್ಬರು ಈ ಜಾಲಕ್ಕೆ ಬಲಿಯಾಗಿ ಸಾವಿರಾರು ರೂಪಾಯಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಸೈಬರ್ ಕ್ರಿಮಿನಲ್‌ಗಳು ಶ್ರೀಮಂತರನ್ನು ಮತ್ತು ಐಷಾರಾಮಿ ಫ್ಲಾಟ್ ಹುಡುಕುವವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇವರ ಕಾರ್ಯವೈಖರಿ ಅತ್ಯಂತ ವ್ಯವಸ್ಥಿತವಾಗಿದೆ. ಮೊದಲಿಗೆ ವಂಚಕರು Housing.com ಅಥವಾ NoBroker ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಮನೆ ಬಾಡಿಗೆಗೆ ಇದೆ ಎಂದು ಜಾಹೀರಾತು ನೀಡುತ್ತಾರೆ. ಈ ಜಾಹೀರಾತುಗಳಲ್ಲಿ ಬಳಸುವ ಫೋಟೋಗಳು ಎಐ (AI) ತಂತ್ರಜ್ಞಾನದಿಂದ ಸೃಷ್ಟಿಸಿದ ಅತ್ಯಂತ ಆಕರ್ಷಕವಾದ ನಕಲಿ ಚಿತ್ರಗಳಾಗಿರುತ್ತವೆ. ಬಳಿಕ ಮನೆ ಬಾಡಿಗೆ ಪಡೆಯಲು ಆಸಕ್ತಿ ತೋರುವ ಗ್ರಾಹಕರ ಜೊತೆ ವಂಚಕರು ಅತ್ಯಂತ ಸುಸಂಸ್ಕೃತವಾಗಿ ಮತ್ತು ಮೃದುವಾಗಿ ಮಾತನಾಡುತ್ತಾರೆ. ಇದರಿಂದ ಗ್ರಾಹಕರಿಗೆ ಯಾವುದೇ ಅನುಮಾನ ಬರುವುದಿಲ್ಲ. ನಂತರ ಮನೆ ನೋಡಲು ಬರುವ ಮೊದಲು ಭದ್ರತೆಯ ದೃಷ್ಟಿಯಿಂದ ವಿಸಿಟರ್ ಪಾಸ್ ಪಡೆಯಬೇಕು ಎಂದು ನಂಬಿಸುತ್ತಾರೆ. ನಂತರ ‘ಎಂಟ್ರಿ ಚಾರ್ಜ್’, ‘ಸೆಕ್ಯೂರಿಟಿ ಪ್ರೊಸೆಸಿಂಗ್ ಫೀ’ ಎನ್ನುತ್ತಾ ಹಂತ ಹಂತವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ.

ವೈದ್ಯೆಗೆ ಹಣದ ಟೋಪಿ ಹಾಕಿದ ವಂಚಕರು

 ಇತ್ತೀಚಿನ ಬೆಂಗಳೂರಿನ ಸೌಮ್ಯ ಎಂಬ ವೈದ್ಯೆ ಈ ವಂಚಕರ ಜಾಲಕ್ಕೆ ಸಿಕ್ಕಿದ್ದಾರೆ. ಹೌಸಿಂಗ್ ಡಾಟ್ ಕಾಮ್‌ನಲ್ಲಿ ಐಷಾರಾಮಿ ಫ್ಲಾಟ್‌ನ ಫೋಟೋ ನೋಡಿ ಮಾರುಹೋದ ಇವರು, ವಂಚಕರ ಮಾತು ನಂಬಿ ಮೊದಲು 2,000 ರೂ. ‘ವಿಸಿಟರ್ ಪಾಸ್’ ಶುಲ್ಕ ಪಾವತಿಸಿದ್ದಾರೆ. ಬಳಿಕ ಅಡ್ವಾನ್ಸ್ ರೂಪದಲ್ಲಿ 7,000 ರೂ. ನೀಡಿದ್ದಾರೆ. ಹೀಗೆ ಒಟ್ಟು 10 ಸಾವಿರಕ್ಕೂ ಅಧಿಕ ಹಣವನ್ನು ವರ್ಗಾಯಿಸಿದ ನಂತರ, ವಂಚಕರು ನೀಡಿದ ವಿಳಾಸಕ್ಕೆ ಹೋಗಿ ನೋಡಿದಾಗ ಅಲ್ಲಿ ಅಂತಹ ಯಾವುದೇ ಫ್ಲಾಟ್ ಇರಲಿಲ್ಲ, ಬದಲಿಗೆ, ಆ ಸ್ಥಳದ ಭದ್ರತಾ ಸಿಬ್ಬಂದಿ ಇದೇ ರೀತಿ ಅನೇಕರು ಇಲ್ಲಿಗೆ ಬಂದು ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಬೇಸರಗೊಂಡ ಸೌಮ್ಯ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

ಸೈಬರ್ ಪೊಲೀಸರ ಎಚ್ಚರಿಕೆ

ಸದ್ಯ ವೈದ್ಯೆ ಸೌಮ್ಯ ಅವರು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಸಾರ್ವಜನಿಕರಿಗೆ ಕೆಲವು ಮಹತ್ವದ ಸಲಹೆ ನೀಡಿದ್ದಾರೆ:

  1. ಮುಂಗಡ ಹಣ ನೀಡಬೇಡಿ: ಮನೆ ಅಥವಾ ಫ್ಲಾಟ್ ಅನ್ನು ಖುದ್ದಾಗಿ ಭೇಟಿ ನೀಡಿ ಮಾಲೀಕರನ್ನು ಭೇಟಿಯಾಗುವ ಮೊದಲು ಯಾವುದೇ ‘ವಿಸಿಟರ್ ಪಾಸ್’ ಅಥವಾ ‘ರಿಜಿಸ್ಟ್ರೇಷನ್’ ಹೆಸರಿನಲ್ಲಿ ಹಣ ನೀಡಬೇಡಿ.

  2. ನೈಜತೆ ಪರಿಶೀಲಿಸಿ: ಅತಿಯಾಗಿ ಆಕರ್ಷಕವಾಗಿ ಕಾಣುವ ಮತ್ತು ಮಾರುಕಟ್ಟೆ ದರಕ್ಕಿಂತ ಕಡಿಮೆ ಬಾಡಿಗೆಗೆ ಸಿಗುವ ಮನೆಗಳ ಬಗ್ಗೆ ಎಚ್ಚರವಿರಲಿ.

  3. ಸೈಬರ್ ಹೆಲ್ಪ್‌ಲೈನ್: ವಂಚನೆಗೆ ಒಳಗಾದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ.

Exit mobile version