ಬೆಂಗಳೂರು: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಆಕೆಯ ಭಾವಿ ಪತಿಯೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಅನುಮಾನದ ಸುಳಿಗೆ ಸಿಲುಕಿದ ಆರೋಪಿ ಸೈಯದ್ ಶಬೀಲ್, ಮದುವೆಯಾಗಬೇಕಿದ್ದ ಹುಡುಗಿಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಕುತ್ತಿಗೆ ಸೀಳಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಡಿ.ಜೆ. ಹಳ್ಳಿಯಲ್ಲಿ ನಡೆದಿದೆ.
ಕೋಲಾರ ಮೂಲದ ಈ ಅಪ್ರಾಪ್ತ ಬಾಲಕಿ ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಆಗಾಗ ಬರುತ್ತಿದ್ದಳು. ಈ ವೇಳೆ ಈರುಳ್ಳಿ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಶಬೀಲ್ ಎಂಬಾತನ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಮನೆಯವರಿಗೂ ಈ ವಿಷಯ ತಿಳಿದಾಗ, ಹಿರಿಯರೆಲ್ಲಾ ಸೇರಿ ಅವರಿಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದರು. ಅದರಂತೆ 2025ರ ಜೂನ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನಡೆದಿತ್ತು. ಶೀಘ್ರದಲ್ಲೇ ಮದುವೆ ಮಾಡುವ ತಯಾರಿಯಲ್ಲಿದ್ದ ಕುಟುಂಬಸ್ಥರಿಗೆ ಮಗಳ ಸಾವು ಬರಸಿಡಿಲಿನಂತೆ ಬಂದೆರಗಿದೆ.
ಇತ್ತೀಚೆಗೆ ಶಬೀಲ್ ಆಕೆಯ ನಡತೆಯ ಮೇಲೆ ಸಂಶಯ ಪಡಲು ಶುರು ಮಾಡಿದ್ದ ಎನ್ನಲಾಗಿದೆ. ಇದೇ ಹಳೆಯ ದ್ವೇಷವನ್ನು ಇಟ್ಟುಕೊಂಡಿದ್ದ ಆರೋಪಿ, ಮಾತುಕತೆಯ ನೆಪದಲ್ಲಿ ಬಾಲಕಿಯನ್ನು ಸಕ್ಕರೆ ಮಂಡಿಯ ಬಳಿಯಿರುವ ಪಾಳುಬಿದ್ದ ಮನೆಗೆ ಕರೆಸಿಕೊಂಡಿದ್ದಾನೆ. ಮನೆಯಲ್ಲಿ ಮೊಬೈಲ್ ಬಿಟ್ಟು ಆತನನ್ನು ಭೇಟಿಯಾಗಲು ಹೋದ ಬಾಲಕಿ ಮತ್ತೆ ಹಿಂತಿರುಗಲೇ ಇಲ್ಲ. ಬೆಳಗ್ಗೆ 6 ಗಂಟೆಗೆ ಹೋದವಳು 10 ಗಂಟೆಯಾದರೂ ಬಾರದೇ ಇದ್ದಾಗ ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ. ಶಬೀಲ್ ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದ್ದರಿಂದ ಅನುಮಾನಗೊಂಡ ಮನೆಯವರು ಆತ ಓಡಾಡುತ್ತಿದ್ದ ಜಾಗಗಳನ್ನು ಹುಡುಕಿದಾಗ ಪಾಳುಮನೆಯಲ್ಲಿ ರಕ್ತದ ಮಡುವಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಆಗಮಿಸಿದ ಡಿ.ಜೆ. ಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆಯ ಭೀಕರತೆ ಬೆಳಕಿಗೆ ಬಂದಿದೆ. ಆರೋಪಿ ಕೇವಲ ಕುತ್ತಿಗೆ ಕೊಯ್ದಿಲ್ಲ, ಬದಲಾಗಿ ವಿಕೃತವಾಗಿ ಎದೆ ಮತ್ತು ಗುಪ್ತಾಂಗದ ಭಾಗಕ್ಕೆ ಇರಿದು ಹತ್ಯೆ ಮಾಡಿದ್ದಾನೆ. ಘಟನೆ ನಡೆದ ಬಳಿಕ ಆರೋಪಿ ಶಬೀಲ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ವಿಶೇಷ ತಂಡ ರಚಿಸಿ, ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.





