ಮತ್ತೆ ಕೊರೊನಾ ಕಾಟ ಶುರು: ಬೆಂಗಳೂರಿನ 9 ತಿಂಗಳ ಕಂದನಿಗೂ ಸೋಂಕು ದೃಢ

Untitled design 2025 05 23t184046.272
ADVERTISEMENT
ADVERTISEMENT

 ಬೆಂಗಳೂರು: ಕೊರೊನಾ ವೈರಸ್‌ಗೆ ಒಂದು ಸಮಯದಲ್ಲಿ ಇಡೀ ದೇಶವೇ ತತ್ತರಿಸಿತ್ತು. ಇದೀಗ ಬೆಂಗಳೂರಿನಲ್ಲಿ 9 ತಿಂಗಳ ಹಸುಗೂಸಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ಕೊರೊನಾ ಮತ್ತೆ ಕಾಣಿಸಿಕೊಂಡಿದ್ದು, ರಾಜ್ಯಾದ್ಯಂತ 16 ಕೇಸ್‌ಗಳು ದಾಖಲಾಗಿವೆ. ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆಯ 9 ತಿಂಗಳ ಮಗುವಿನಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಮೇ 22 ರಂದು ರಾಪಿಡ್ ಆಂಟಿಜೆನ್ ಟೆಸ್ಟ್ (RAT) ಮೂಲಕ ಈ ಸೋಂಕು ದೃಢಪಟ್ಟಿದೆ. ಸದ್ಯ, ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಬೆಂಗಳೂರಿನ ಕಲಾಸಿಪಾಳ್ಯದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ. ಮಗುವನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಕೊರೊನಾ ಕೇಸ್‌ಗಳ ಏರಿಕೆಯಿಂದಾಗಿ ಜನರಲ್ಲಿ ಎಚ್ಚರಿಕೆಯ ಅಗತ್ಯವಿದೆ. ಈಗಾಗಲೇ ಆಂಧ್ರ ಪ್ರದೇಶದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೈ ರಿಸ್ಕ್ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ ಹೇರಲಾಗಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾಲ್, ರೆಸ್ಟೋರೆಂಟ್ ಮತ್ತು ವಿಮಾನ ನಿಲ್ದಾಣಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಗರ್ಭಿಣಿಯರು ಮತ್ತು 60 ವರ್ಷ ಮೇಲ್ಪಟ್ಟವರು ಆದಷ್ಟು ಮನೆಯಲ್ಲಿಯೇ ಇರಬೇಕೆಂದು ಸರ್ಕಾರ ಸೂಚಿಸಿದೆ. ಕೊರೊನಾ ಲಕ್ಷಣಗಳು ಕಂಡುಬಂದರೆ ತಕ್ಷಣ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಕೊರೊನಾ ಮತ್ತೆ ತಲೆ ಎತ್ತಿದೆ. ಸಿಂಗಾಪುರ, ಹಾಂಗ್‌ಕಾಂಗ್, ಮತ್ತು ಥೈಲೆಂಡ್‌ನಲ್ಲಿ IN.1 ಕೋವಿಡ್ ವೈರಸ್ ತೀವ್ರವಾಗಿ ಹಬ್ಬುತ್ತಿದೆ. ಭಾರತದಲ್ಲೂ ಸಕ್ರಿಯ ಕೇಸ್‌ಗಳ ಸಂಖ್ಯೆ 257ಕ್ಕೆ ಏರಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ಕಾಣಿಸಿಕೊಂಡಿರುವುದರಿಂದ, ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈ ತೊಳೆಯುವುದನ್ನು ಮುಂದುವರಿಸಬೇಕು.

Exit mobile version