ದೇಶದ ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿ ಸಫಾರಿ ದರವನ್ನು ಪರಿಷ್ಕರಿಸಲಾಗಿದ್ದು, ನೂತನ ದರ ಇಂದಿನಿಂದ ಜಾರಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಸಫಾರಿ ಮೂಲಕ ಇಲ್ಲಿನ ಕಾಡು ಮತ್ತು ವನ್ಯಜೀವಿ ಸಂಕುಲವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಬಂಡೀಪುರ ಸಫಾರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ವನ್ಯಜೀವಿ ಸೌಂದರ್ಯವನ್ನು ಸವಿದಿದ್ದಾರೆ. ಗಣ್ಯರ ಭೇಟಿ ಬಳಿಕ ಬಂಡೀಪುರ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಮತ್ತಷ್ಟು ಜನಪ್ರಿಯತೆ ಗಳಿಸಿದೆ. ವಿಶೇಷವಾಗಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಸಫಾರಿ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಕಂಡುಬರುತ್ತಿದ್ದು, ಕೆಲವೊಮ್ಮೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ.
ಇದೀಗ ಅರಣ್ಯ ಇಲಾಖೆ ಸಫಾರಿ ದರವನ್ನು ಪರಿಷ್ಕರಿಸಿದೆ. ಪರಿಷ್ಕೃತ ದರಪಟ್ಟಿಯ ಪ್ರಕಾರ ಬಂಡೀಪುರ ಬಸ್ ಸಫಾರಿಯ ವಯಸ್ಕರ ಟಿಕೆಟ್ ದರ ₹650ರಿಂದ ₹1,000ಕ್ಕೆ ಏರಿಕೆಯಾಗಿದೆ. ಮಕ್ಕಳ ಟಿಕೆಟ್ ದರ ₹350ರಿಂದ ₹500ಕ್ಕೆ ಹೆಚ್ಚಿಸಲಾಗಿದೆ. ಜೀಪ್ ಸಫಾರಿಗೆ ವಯಸ್ಕರ ಟಿಕೆಟ್ ₹1,000ರಿಂದ ₹1,500ಕ್ಕೆ ಹಾಗೂ ಮಕ್ಕಳ ಟಿಕೆಟ್ ₹500ರಿಂದ ₹750ಕ್ಕೆ ಏರಿಕೆಯಾಗಿದೆ.
ಇದರ ಜೊತೆಗೆ ಸಫಾರಿ ವೇಳೆ ಬಳಸುವ ಕೆಲವು ಕ್ಯಾಮರಾಗಳಿಗೂ ಶುಲ್ಕ ನಿಗದಿಪಡಿಸಲಾಗಿದೆ. 200 ಎಂಎಂಗಿಂತ ಹೆಚ್ಚಿನ ಸಾಮರ್ಥ್ಯದ ಕ್ಯಾಮರಾಗಳಿಗೆ ₹1,500 ಹಾಗೂ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ವಾಹನಗಳ ಪಾರ್ಕಿಂಗ್ ಶುಲ್ಕದಲ್ಲೂ ದರ ನಿಗದಿಪಡಿಸಲಾಗಿದ್ದು, ಕಾರುಗಳಿಗೆ ₹100, ಲಘು ವಾಹನಗಳಿಗೆ ₹200 ಹಾಗೂ ಬಸ್‌ಗಳಿಗೆ ₹300 ಪಾವತಿಸಬೇಕಾಗಿದೆ.
ಮೂರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಹಾಗೂ ಸಫಾರಿ ಟಿಕೆಟ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದರೆ ಸಫಾರಿ ವೇಳೆ ಇಂತಹ ಮಕ್ಕಳು ಪ್ರತ್ಯೇಕ ಆಸನ ಪಡೆಯುವಂತಿಲ್ಲ. ಪೋಷಕರ ಆಸನವನ್ನೇ ಹಂಚಿಕೊಳ್ಳಬೇಕಾಗಿದೆ.
ಮೊದಲ ದಿನ 191 ಪ್ರವಾಸಿಗರು
ದರ ಪರಿಷ್ಕರಣೆ ಜಾರಿಯಾದ ಮೊದಲ ದಿನವೇ 191 ಪ್ರವಾಸಿಗರು ಬಂಡೀಪುರ ಸಫಾರಿ ನಡೆಸಿದ್ದಾರೆ. ಜಿ.ಎಸ್.ಬೆಟ್ಟ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ನೀಡಿದ ಮಾಹಿತಿಯ ಪ್ರಕಾರ, ಜಂಗಲ್ ಲಾಡ್ಜ್ಸ್ ಸೇರಿದಂತೆ ಸಫಾರಿಯಿಂದ ಒಟ್ಟು ₹2,72,824 ಆದಾಯ ಸಂಗ್ರಹವಾಗಿದೆ.
ದರ ಏರಿಕೆಯ ಹೊರತಾಗಿಯೂ ಮೊದಲ ದಿನ ಪ್ರವಾಸಿಗರ ಸಂಖ್ಯೆಯಲ್ಲಿ ಯಾವುದೇ ಗಮನಾರ್ಹ ಇಳಿಕೆ ಕಂಡುಬಂದಿಲ್ಲ. ಒಟ್ಟು ನಾಲ್ಕು ಬಸ್‌ಗಳು ಏಳು ಟ್ರಿಪ್ ನಡೆಸಿವೆ. ನಾಲ್ಕು ಕ್ಯಾಂಪರ್‌ಗಳು ಐದು ಟ್ರಿಪ್ ಹಾಗೂ ಒಂದು ಜಿಪ್ಸಿ ಎರಡು ಟ್ರಿಪ್ ನಡೆಸಿದೆ.
ಸಫಾರಿ ದರ ಏರಿಕೆಯಾಗಿರುವುದರಿಂದ ಪ್ರವಾಸಿಗರಿಗೆ ಹೆಚ್ಚುವರಿ ಖರ್ಚು ಎದುರಾಗಿದ್ದರೂ, ಬಂಡೀಪುರದ ಪ್ರಕೃತಿ ಸೌಂದರ್ಯ ಹಾಗೂ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳುವ ಆಸಕ್ತಿಯಲ್ಲಿ ಮಾತ್ರ ಮೊದಲ ದಿನ ಯಾವುದೇ ಕುಸಿತ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಪರಿಷ್ಕೃತ ದರ ಪ್ರವಾಸಿಗರ ಸಂಖ್ಯೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.





