ಬೆಂಗಳೂರು: ನ್ಯಾ. ನಾಗಮೋಹನ್ ದಾಸ್ ಸಮಿತಿಯ ಒಳಮೀಸಲಾತಿ ವರದಿಯನ್ನು ವಿರೋಧಿಸಿ ಬಲಗೈ ಸಮುದಾಯವು ಇಂದು ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಸಮುದಾಯದ ನಾಯಕರು ಮತ್ತು ಲಕ್ಷಾಂತರ ಜನರು ಕಂಡು ಕೇಳರಿಯದ ಒಗ್ಗಟ್ಟು ಪ್ರದರ್ಶಿಸಲು ಬೀದಿಗೆ ಇಳಿಯುತ್ತಿದ್ದಾರೆ.
ಹೋರಾಟದ ಮುಖ್ಯ ಉದ್ದೇಶವೇನು ?
ನ್ಯಾ. ನಾಗಮೋಹನ್ ದಾಸ್ ಅವರು ಸಲ್ಲಿಸಿರುವ ಒಳಮೀಸಲಾತಿ ವರದಿಯು ಅವೈಜ್ಞಾನಿಕ, ಅಪೂರ್ಣ ಮತ್ತು ದೋಷಪೂರಿತವಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ. ಸಮಿತಿಯು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆಸಿಲ್ಲ ಮತ್ತು ವರದಿಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂದು ಸಮುದಾಯದ ಮುಖಂಡರು ದೂರಿದ್ದಾರೆ. ಈ ವರದಿಯನ್ನು ಸರ್ಕಾರ ಕೂಡಲೇ ತಿರಸ್ಕರಿಸಬೇಕು ಮತ್ತು ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮಗ್ರ ಸಮೀಕ್ಷೆಯನ್ನು ಪುನಃ ನಡೆಸಬೇಕು ಎಂಬುದು ಹೋರಾಟದ ಮುಖ್ಯ ಬೇಡಿಕೆಯಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಸಮ್ಮತವಾದ ಹೊಸ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಬೆಳಿಗ್ಗೆ 11 ಗಂಟೆಯಿಂದ ಈ ಬೃಹತ್ ಪ್ರತಿಭಟನೆ ಆರಂಭವಾಗಲಿದೆ. ಜ್ಞಾನಪ್ರಕಾಶ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ.
ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ. ಕೆ.ಆರ್. ಸರ್ಕಲ್, ವಿಧಾನಸೌಧ, ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದರೊಂದಿಗೆ ಮೈಸೂರು ರಸ್ತೆ ಮತ್ತು ತುಮಕೂರು ರಸ್ತೆಯ ಮೂಲಕ ನಗರ ಪ್ರವೇಶಿಸುವ ವಾಹನಗಳ ಸಂಖ್ಯೆ ಹೆಚ್ಚಾಗುವುದರಿಂದ ಅಲ್ಲಿಯೂ ಸಂಚಾರ ವಿಳಂಬವಾಗಬಹುದು. ಸಾರ್ವಜನಿಕರು ಫ್ರೀಡಂ ಪಾರ್ಕ್ ರಸ್ತೆಯನ್ನು ಹೊರತುಪಡಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಬಲಗೈ ಸಮುದಾಯದ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಲು ಈ ಪ್ರತಿಭಟನೆಯನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ನಮಗೆ ಜನಸಂಖ್ಯೆಯ ಆಧಾರದ ಮೇಲೆ ನ್ಯಾಯಯುತವಾದ ಪಾಲು ಸಿಗಬೇಕು. ಅರ್ಧಂಬರ್ಧ ಮಾಡಿರುವ ಸಮೀಕ್ಷೆಯ ವರದಿ ನಮಗೆ ಒಪ್ಪಿಗೆಯಿಲ್ಲ ಎಂದು ಸಮುದಾಯದ ನಾಯಕರು ಗುಡುಗಿದ್ದಾರೆ.




