ಬಾಗಲಕೋಟೆಯಲ್ಲಿ ಪೊಲೀಸರಿಂದ ಹೈ-ಅಲರ್ಟ್: ಇಂದು ಮಧ್ಯರಾತ್ರಿಯಿಂದ ಮದ್ಯ ಮಾರಾಟ ನಿಷೇಧ

Untitled design 2026 02 25T220414.164

ಬಾಗಲಕೋಟೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಫೆಬ್ರವರಿ 19ರಂದು ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ವೇಳೆ ಸಂಭವಿಸಿದ ಕಲ್ಲೆಸೆತ ಘಟನೆಗೆ ವಿರೋಧ ವ್ಯಕ್ತಪಡಿಸಿ ಫೆಬ್ರವರಿ 26ರಂದು ಹಿಂದೂ ಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು (ಫೆ.25) ಮಧ್ಯರಾತ್ರಿಯಿಂದ ನಾಳೆ (ಫೆ.26) ಮಧ್ಯರಾತ್ರಿವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ (SP) ಮನವಿಯ ಮೇರೆಗೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಈ ಆದೇಶ ಹೊರಡಿಸಿದ್ದು, ಹಳೆ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ವಿಧದ ಮದ್ಯ ಮಾರಾಟ, ಸಂಗ್ರಹ ಹಾಗೂ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನವನಗರದಲ್ಲಿ ಬೃಹತ್ ಧರಣಿ

ಹಿಂದೂ ಸಮಾಜದ ವಿವಿಧ ಮುಖಂಡರ ನೇತೃತ್ವದಲ್ಲಿ ಫೆಬ್ರವರಿ 26ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ನವನಗರದ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ. ಮೂಲತಃ ಈ ಪ್ರತಿಭಟನೆಯನ್ನು ಹಳೆ ಬಾಗಲಕೋಟೆಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸ್ಥಳವನ್ನು ನವನಗರಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ.

ಪ್ರತಿಭಟನಾಕಾರರು ಫೆಬ್ರವರಿ 19ರಂದು ನಡೆದ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆಸಿದ ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

15 ದಿನಗಳ ಗಡುವು

ಪ್ರತಿಭಟನೆ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿರುವ ಮುಖಂಡರು ಆರೋಪಿಗಳ ಬಂಧನಕ್ಕೆ 15 ದಿನಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎರಡನೇ ಹಂತದಲ್ಲಿ ಉಗ್ರ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆಯನ್ನು ಮನಗಂಡು ಜಿಲ್ಲಾಡಳಿತ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಪೊಲೀಸ್ ಹೈ ಅಲರ್ಟ್, ಡ್ರೋನ್ ಕಣ್ಗಾವಲು

ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದ ಪ್ರಮುಖ ವೃತ್ತಗಳು, ಸೂಕ್ಷ್ಮ ಪ್ರದೇಶಗಳು ಹಾಗೂ ಹಳೆ ಬಾಗಲಕೋಟೆ ಭಾಗಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರೋನ್ ಮೂಲಕ ಕಣ್ಗಾವಲು ನಡೆಸಲಾಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿರಂತರ ನಿಗಾವಹಿಸಲಾಗಿದೆ.

ಸಂಜೆ ವೇಳೆ ಹಳೆ ಬಾಗಲಕೋಟೆಯಲ್ಲಿ ಪೊಲೀಸ್ ಪಡೆಯಿಂದ ಭರ್ಜರಿ ತಾಲೀಮು ನಡೆಸಲಾಗಿದೆ. ಸಾರ್ವಜನಿಕ ಶಾಂತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ. ಒಟ್ಟು 5 ಎಸ್ಪಿಗಳು/ಎಎಸ್ಪಿಗಳು, 12 ಡಿವೈಎಸ್ಪಿಗಳು, 32 ಸಿಪಿಐಗಳು, 75 ಪಿಎಸ್ಐಗಳು ಸೇರಿದಂತೆ ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಶಾಂತಿ ಕಾಪಾಡಲು ಜಿಲ್ಲಾಡಳಿತದ ಮನವಿ

ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಿದೆ. ಯಾವುದೇ ವದಂತಿಗಳಿಗೆ ಕಿವಿಗೊಡದೇ, ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

Exit mobile version