ಹುಬ್ಬಳ್ಳಿ: ಯಾರು ಪ್ರಾರ್ಥಿಸುತ್ತಾರೋ, ಪೂಜಿಸುತ್ತಾರೋ, ಆರಾಧಿಸುತ್ತಾರೋ ಅವರಿಗೆ ಅದೇ ರೂಪದಲ್ಲಿ ದೇವರು ದರ್ಶನಾಶೀರ್ವಾ ಮಾಡುತ್ತಾರೆ. ಅವರವರ ಭಾವಕ್ಕೆ ತಕ್ಕಂತೆ ಶಿವನಿದ್ದಾನೆ. ಭಜಿಸಿದಂತೆ ಫಲ ಕೊಡುತ್ತಾನೆ ಎಂದು ಶ್ರೀಕ್ಷೇತ್ರ ಕನ್ಹೇರಿಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ಇಲ್ಲಿಯ ಶಿರೂರ ಪಾರ್ಕ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿರುವ ಶ್ರೀ ಅಯ್ಯಪ್ಪ ಸ್ವಾಮಿ ಪರಿವಾರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ದೇಶದ ತುಂಬೆಲ್ಲ ಒಂದು ಕೋಟಿ ದೇವಸ್ಥಾನಗಳಿವೆ. ಪ್ರತಿ ವರ್ಷ ಎರಡೂವರೆ ಮೂರುಸಾವಿರ ದೇವಸ್ಥಾನಗಳ ಆದಾಯ ನಾಲ್ಕೂವರೆ ಲಕ್ಷ ಕೋಟಿ ರೂ. ಇದೆ. ಮಾರುಕಟ್ಟೆ, ಕಲೆ, ಸಾಹಿತ್ಯ, ಪ್ರವಾಸೋದ್ಯಮದ ವಿಸ್ತಾರವನ್ನೂ ಹೊಂದಿವೆ. ಸುಮಾರು 10 ಕೋಟಿಗಿಂತಲೂ ಹೆಚ್ಚು ಜನರು ತಮ್ಮ ವೃತ್ತಿಗಳನ್ನು ದೇವಸ್ಥಾನಗಳ ಮೂಲಕ ಹೊಂದಿದ್ದಾರೆ ಎಂದರು.
ನಮ್ಮ ಮನಸ್ಸಿಗೆ ಭೌತಿಕ, ಬೌಧ್ಧಿಕ ಪದಾರ್ಥ ಹಾಕಿದರೆ ತಣಿಯುವುದಿಲ. ಆರಾಧನೆ, ಭಕ್ತಿ, ಪೂಜೆ ಹಾಕಿದರೆ ಮನಸ್ಸು ತಣಿಯುತ್ತದೆ. ಉಪನಿಷತ್‌ಗಳಲ್ಲಿ ಸಗುಣೋಪಾಸನೆ ಇದೆ. ಇದರ ಮೂಲಕ ನಮ್ಮ ಹಿರಿಯರು ಗ್ರಾಮದಲ್ಲಿ ದೇವಾಲಯ, ಮನೆಯಲ್ಲಿ ಜಗಲಿ ನಿರ್ಮಿಸಿ ಉಪಾಸನೆಗೆ ಹಚ್ಚಿದರು. ಮನಸ್ಸು ಶುದ್ಧ, ಪ್ರಸನ್ನ, ಸ್ವಚ್ಛವಾಗಿಡಲು ದೈವೀ ಉಪಾಸನೆಯತ್ತ ತೆಗೆದುಕೊಂಡು ಹೋಗುವಂತೆ ಮಾಡಿದರು. ಈ ಮೂಲಕ ನಮ್ಮನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕು ಎಂಬ ಸಂಕಲ್ಪ ಮಾಡಿದರು. ಆದರೆ, ಅಲ್ಪ ಬುದ್ಧಿಯವರಿಗೆ ಇವುಗಳನ್ನು ಅರ್ಥ ಮಾಡಿಕೊಳ್ಳು ಸಾಧ್ಯವಿಲ್ಲ ಎಂದರು.
ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಡಾ.ವಿ.ಎಸ್.ವಿ. ಪ್ರಸಾದ, ಆನಂದ ಗುರುಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ತದ್ರೂಪ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಿಸುವ ಕನಸು ಕಂಡು ನನಸು ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿದೇಶಕರಾದ ಡಾ. ಆನಂದ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಟ್ರಸ್ಟ್ ಸದಸ್ಯರು, ಭಕ್ತರು ಜತೆಗೂಡಿ ಮಾಡಿದ ಕೆಲಸದಿಂದ ಇಂದು ಭಕ್ತರ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ಕರ್ನಾಟಕಕ್ಕೇ ಮಾದರಿಯಾಗಿದೆ ಎಂದರು.
ದೇವಸ್ಥಾನದ ಧರ್ಮಾಧಿಕಾರಿ ಆನಂದ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಲಬುರ್ಗಿಯ ಸವಿತಾನಂದ ಸ್ವಾಮೀಜಿ, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಅಧ್ಯಕ್ಷರು ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಶಬರಿಮಲೈ ಅಯ್ಯಪ್ಪ ಸೇವಾ ಸಮಾಜದ ಅಖಿಲ ಭಾರತ ಅಧ್ಯಕ್ಷ ಟಿ.ಬಿ. ಶೇಖರ, ಟ್ರಸ್ಟ್ ಕಾರ್ಯದರ್ಶಿ ಜಯರಾಮ ಶೆಟ್ಟಿ, ಕುಮಾರ ಗುರು ತಂತ್ರಿಗಳು ಉಪಸ್ಥಿತರಿದ್ದರು.
