ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿ ಎನ್ನದೆ ಧರಣಿ ನಡೆಸುತ್ತಿದ್ದಾರೆ. ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ, ನಿವೃತ್ತಿ ಸಂದರ್ಭದಲ್ಲಿ ₹5 ಲಕ್ಷ ಇಡಿಗಂಟು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಕಾರ್ಯಕರ್ತೆಯರು, ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪರಿಣಾಮವಾಗಿ ಫ್ರೀಡಂ ಪಾರ್ಕ್‌ನ ಆವರಣದಲ್ಲೇ ಪ್ರತಿಭಟನಾಕಾರರಿಗೆ ಜಾಗ ಸಾಲದಂತಾಗಿದೆ. ಹೀಗಾಗಿ ಪಾರ್ಕ್‌ನ ಪಕ್ಕದ ಕಾಳಿದಾಸ ರಸ್ತೆ ಹಾಗೂ ಮುಂಭಾಗದ ಶೇಷಾದ್ರಿ ರಸ್ತೆಯಲ್ಲೂ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ತಮ್ಮ ಕುಟುಂಬ, ಮನೆ-ಮಠಗಳನ್ನು ಬಿಟ್ಟು ಬಂದಿರುವ ಕಾರ್ಯಕರ್ತೆಯರು ಸರ್ಕಾರದ ಗಮನ ಸೆಳೆಯಲು ಹೋರಾಟ ತೀವ್ರಗೊಳಿಸಿದ್ದಾರೆ.
ಕೊರೆವ ಚಳಿಯಲ್ಲೂ ಮುಂದುವರಿದ ಅಹೋರಾತ್ರಿ ಧರಣಿ
ಬೆಂಗಳೂರಿನಲ್ಲಿ ರಾತ್ರಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದರೂ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಕಂಬಳಿ ಹೊದ್ದು ಫ್ರೀಡಂ ಪಾರ್ಕ್‌ನಲ್ಲೇ ರಾತ್ರಿ ಕಳೆಯುತ್ತಿದ್ದಾರೆ. ಕೆಲವರು ತಮ್ಮ ಪುಟ್ಟ ಮಕ್ಕಳನ್ನೂ ಜೊತೆಯಲ್ಲಿ ಕರೆತಂದು ಬೀದಿಯಲ್ಲೇ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.
ಹಗಲು ಬಿಸಿಲು, ರಾತ್ರಿ ಚಳಿ ಎನ್ನದೆ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು, ಸರ್ಕಾರ ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ ಎಂಬುದು ಪ್ರತಿಭಟನಾಕಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಇಂದಿನ ಸಚಿವ ಸಂಪುಟ ಸಭೆಯತ್ತ ಆಶಾ ಕಾರ್ಯಕರ್ತೆಯರ ಚಿತ್ತ
ಆಶಾ ಕಾರ್ಯಕರ್ತೆಯರ ಹೋರಾಟದ ನಡುವೆಯೇ ಇಂದು ನಡೆಯಲಿರುವ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾದ ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನದ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಆರೋಗ್ಯ ಇಲಾಖೆಯ ನಿರ್ದೇಶಕಿ ರಜನಿ ಅವರು, ₹15 ಸಾವಿರ ಗೌರವಧನ ನಿಗದಿಪಡಿಸುವ ಪ್ರಸ್ತಾವನೆಯನ್ನು ಇಂದಿನ ಸಚಿವ ಸಂಪುಟ ಸಭೆಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಆಶಾ ಕಾರ್ಯಕರ್ತೆಯರಲ್ಲಿ ಮೂಡಿದೆ.
ಆದರೆ, ಕೇವಲ ಭರವಸೆಗಳಿಗೆ ತೃಪ್ತರಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪ್ರತಿಭಟನಾಕಾರರು ನೀಡಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಎಚ್ಚರಿಕೆ ನೀಡಿದೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು
-
15,000 ರೂಪಾಯಿ ನಿಶ್ಚಿತ ಮಾಸಿಕ ಗೌರವಧನ ನಿಗದಿ
-
ಸಮಸ್ತ ಆ್ಯಪ್ ಮೂಲಕ ಒತ್ತಾಯದ ಮೊಬೈಲ್ ಕೆಲಸ ಕೈಬಿಡಬೇಕು
-
ನಿವೃತ್ತರಾಗಿರುವವರಿಗೆ ಬಾಕಿ ಇಡಿಗಂಟು ತಕ್ಷಣ ಬಿಡುಗಡೆ
-
ಆಶಾ ನಿಧಿ ಬಾಕಿ ಪ್ರೋತ್ಸಾಹಧನ ಬಿಡುಗಡೆ
-
ಸುಗಮಕಾರರ ಮರುನೇಮಕ ಮತ್ತು ಬಾಕಿ ವೇತನ ಪಾವತಿ
-
ಎನ್ಐಒಎಸ್ ತರಬೇತಿ ಪ್ರೋತ್ಸಾಹಧನ ನೀಡಿಕೆ
-
ತೀವ್ರ ಕಾಯಿಲೆ ಚಿಕಿತ್ಸಾ ಅವಧಿಯಲ್ಲಿ 3 ತಿಂಗಳ ಗೌರವಧನ
-
ಸೇವಾ ನಿವೃತ್ತಿ ಇಡಿಗಂಟನ್ನು ಬಂಗಾಳ ಮಾದರಿ 5 ಲಕ್ಷಕ್ಕೆ ಹೆಚ್ಚಿಸಬೇಕು
-
6 ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು
-
ಆರೋಗ್ಯ ಇಲಾಖೆಗೆ ಸಂಬಂಧಿಸದ ಇತರ ಇಲಾಖೆಗಳ ಹೆಚ್ಚುವರಿ ಕೆಲಸ ವಹಿಸಬಾರದು
-
2024-25ನೇ ಸಾಲಿನ 1,500 ರೂಪಾಯಿ ಮಾಸಿಕ ಹಿಂಬಾಕಿ ಮೊತ್ತ ಬಿಡುಗಡೆ
ಈ ನಡುವೆ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
