‘ಅಮ್ಮಾ ಸಾರಿ… ನನ್ನ ಸಾವಿಗೆ ನಾನೇ ಕಾರಣ’ ಎಂದು ಡೆತ್ನೋಟ್ ಬರೆದಿಟ್ಟು 16 ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಳ್ಳಿಯಲ್ಲಿ ನಡೆದಿದೆ. ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಪೂಜಾ ಎಂದು ಗುರುತಿಸಲಾಗಿದೆ. ಮೂಲತಃ ಪಾವಗಡದವರಾದ ಕುಟುಂಬ, ಪತಿ ಮೃತಪಟ್ಟ ಬಳಿಕ ಬೆಂಗಳೂರಿನ ತೋಟದಗುಡ್ಡದಳ್ಳಿಗೆ ಬಂದು ನೆಲೆಸಿತ್ತು. ತಾಯಿ ದಿವ್ಯಾ ಕೆಲಸಕ್ಕೆ ತೆರಳಿ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಎಂದಿನಂತೆ ತಾಯಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಪೂಜಾ ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
ಡೆತ್ನೋಟ್ನಲ್ಲಿ ಏನಿದೆ?
ಮೃತ ಬಾಲಕಿ ಬರೆದಿದ್ದಾಳೆ ಎನ್ನಲಾದ ಡೆತ್ನೋಟ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ‘ಅಮ್ಮಾ ಸಾರಿ, ನನ್ನ ಸಾವಿಗೆ ನಾನೇ ಕಾರಣ’ ಎಂದು ತಾಯಿಯನ್ನು ಉದ್ದೇಶಿಸಿ ಪತ್ರ ಬರೆದಿದ್ದಾಳೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತರನ್ನು ಉದ್ದೇಶಿಸಿಯೂ ಸಾವಿಗೆ ಬರುವಂತೆ ಆಹ್ವಾನಿಸಿ ಕೆಲವು ಸಾಲುಗಳನ್ನು ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಪತ್ರದ ಹಿಂದಿನ ಉದ್ದೇಶವೇನು? ಬಾಲಕಿ ಯಾವ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಂಡಿದ್ದಳು? ಇತ್ತೀಚಿನ ದಿನಗಳಲ್ಲಿ ಆಕೆಯ ಜೀವನದಲ್ಲಿ ಏನಾದರೂ ಸಮಸ್ಯೆಗಳು ಎದುರಾಗಿದ್ದವೇ? ಎಂಬ ಹಲವು ಪ್ರಶ್ನೆಗಳು ಇದೀಗ ಮೂಡಿವೆ.
ಹಲವು ಅನುಮಾನಗಳಿಗೆ ಕಾರಣವಾದ ಘಟನೆ
ಮಾಹಿತಿಯ ಪ್ರಕಾರ, ಘಟನೆಗೂ ಮುನ್ನ ಬಾಲಕಿ ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಳು. ಬಳಿಕ ಬಾಗಿಲಿನ ಕೀಲಿಯನ್ನು ಕಿಟಕಿಯ ಬಳಿ ಇಟ್ಟಿದ್ದಳು ಎನ್ನಲಾಗಿದೆ. ತಾಯಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿ ಶಾಲೆಗೆ ಹೋಗದೆ ಮನೆಯಲ್ಲಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವುದು ಕೂಡ ತನಿಖೆಯ ಪ್ರಮುಖ ಅಂಶವಾಗಿದೆ.
ಪೊಲೀಸರಿಂದ ತನಿಖೆ ಚುರುಕು
16 ವರ್ಷದ ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಡೆತ್ನೋಟ್ನಲ್ಲಿರುವ ಅಂಶಗಳು, ಬಾಲಕಿಯ ವೈಯಕ್ತಿಕ ಜೀವನ, ಸ್ನೇಹಿತರ ವಲಯ ಹಾಗೂ ಇತ್ತೀಚಿನ ಚಟುವಟಿಕೆಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ]
