ಆನೇಕಲ್: ಶಾಲೆಯಲ್ಲಿ ಶಿಕ್ಷಕಿಯರು ನೀಡಿದ ಮಾನಸಿಕ ಕಿರುಕುಳ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಮನನೊಂದು 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಶಾಲೆಯ ಮೂವರು ಶಿಕ್ಷಕಿಯರು ಹಾಗೂ ಓರ್ವ ಅಡುಗೆ ಸಹಾಯಕಿ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಧುಶ್ರೀ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್ ಹಾಗೂ ಕುಟುಂಬದವರ ದೂರಿನ ಆಧಾರದ ಮೇಲೆ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಈರಪ್ಪ, ಸಹ ಶಿಕ್ಷಕಿಯರಾದ ಕವಿತಾ ಮತ್ತು ರೂಪಾ, ಅಡುಗೆ ಸಹಾಯಕಿ ಕಮಲಮ್ಮ ವಿರುದ್ಧ ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣದ ಸಮಗ್ರ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಈ ನಡುವೆ ಶಿಕ್ಷಣ ಇಲಾಖೆ ಪ್ರಾಥಮಿಕ ಹಂತದ ಕ್ರಮವಾಗಿ ಓರ್ವ ಶಿಕ್ಷಕಿ ಹಾಗೂ ಅಡುಗೆ ಸಹಾಯಕಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಉಳಿದ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.
ಮಧುಶ್ರೀ ಶಾಲೆಯಲ್ಲಿ ಕೆಲ ದಿನಗಳಿಂದ ನಿರಂತರ ಮಾನಸಿಕ ಒತ್ತಡ ಅನುಭವಿಸುತ್ತಿದ್ದಳು ಎನ್ನಲಾಗಿದೆ. ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳೊಂದಿಗೆ ನಡೆದ ಘಟನೆಗಳು ಹಾಗೂ ಶಿಕ್ಷಕಿಯರ ವರ್ತನೆಯಿಂದ ಬೇಸತ್ತಿದ್ದ ಆಕೆ, ತನ್ನ ಮೇಲಿನ ಮಾನಸಿಕ ಕಿರುಕುಳದ ಬಗ್ಗೆ ಪತ್ರವೊಂದನ್ನು ಬರೆದಿದ್ದಳು. ಆ ಪತ್ರವನ್ನು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಸಲ್ಲಿಸುವ ಉದ್ದೇಶದಿಂದ ತನ್ನ ಶಾಲಾ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಳು ಎಂದು ತಿಳಿದುಬಂದಿದೆ.
ಆದರೆ ಈ ವಿಚಾರ ಶಿಕ್ಷಕಿಯರಿಗೆ ತಿಳಿದ ಬಳಿಕ ಮಧುಶ್ರೀ ಮೇಲೆ ಇನ್ನಷ್ಟು ಒತ್ತಡ ಮತ್ತು ಕಿರುಕುಳ ಹೆಚ್ಚಾಗಿದೆ ಎಂಬ ಆರೋಪವನ್ನು ಕುಟುಂಬದವರು ಮಾಡಿದ್ದಾರೆ. ಆತ್ಮಹತ್ಯೆಗೂ ಹಿಂದಿನ ದಿನ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಅವರಿಗೆ ತನ್ನ ಸಮಸ್ಯೆಗಳನ್ನು ಮಧುಶ್ರೀ ವಿವರಿಸಿದ್ದಳು ಎನ್ನಲಾಗಿದೆ.
ಅದೇ ದಿನ ಮನೆಗೆ ಮರಳಿದ ಮಧುಶ್ರೀ, ಶಾಲೆಯಲ್ಲಿ ಶಿಕ್ಷಕಿಯರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತನ್ನ ಸಹೋದರಿ ಭಾನುಶ್ರೀಗೆ ವಿವರವಾಗಿ ಹೇಳಿದ್ದಳು. ಬಳಿಕ ಮನನೊಂದಿದ್ದ ಆಕೆ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಧುಶ್ರೀ ಓರ್ವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ರಾಜ್ಯಮಟ್ಟದಲ್ಲಿ ಕಬ್ಬಡಿ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಳು. ಪೊಲೀಸರ ವಶದಲ್ಲಿರುವ ಡೆತ್‌ನೋಟ್‌ನಲ್ಲಿ ಶಾಲೆಯಲ್ಲಿ ನಡೆದ ಘಟನೆಗಳು ತನ್ನ ಮನಸ್ಸಿಗೆ ತೀವ್ರ ನೋವು ತಂದಿವೆ ಎಂದು ಮಧುಶ್ರೀ ಉಲ್ಲೇಖಿಸಿದ್ದಾಳೆ. ತನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ, ಆ ಅವಮಾನವನ್ನು ಸಹಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾಳೆ.
ಜೊತೆಗೆ ತನ್ನ ತಾಯಿ, ಅಕ್ಕ, ತಂಗಿ ಹಾಗೂ ತಮ್ಮನಿಗೆ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿ, ಯಾರೂ ತನ್ನ ತಾಯಿಯನ್ನು ದೂಷಿಸಬಾರದು ಎಂದು ಮನವಿ ಮಾಡಿದ್ದಾಳೆ. ಎಲ್ಲರೂ ತನ್ನನ್ನು ಕ್ಷಮಿಸಬೇಕು ಎಂಬ ಭಾವನಾತ್ಮಕ ಮಾತುಗಳನ್ನೂ ದಾಖಲಿಸಿದ್ದಾಳೆ.
ಈ ಪ್ರಕರಣ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆ ಶಾಲಾ ಶಿಕ್ಷಣ ಇಲಾಖೆ ಈಗಾಗಲೇ ತ್ರಿಸದಸ್ಯ ತನಿಖಾ ಸಮಿತಿಯನ್ನು ರಚಿಸಿದೆ. ಸಮಿತಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಅಧಿಕಾರಿಗಳ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದು, ಸಮಗ್ರ ವರದಿ ಸಲ್ಲಿಸಿದ ಬಳಿಕ ಮತ್ತಷ್ಟು ಇಲಾಖಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸದ್ಯ ಪೊಲೀಸರು ಡೆತ್‌ನೋಟ್, ಸಾಕ್ಷ್ಯಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ.
