14ರ ಹರೆಯದಲ್ಲೇ ತಾಯಿಯಾದ ಬಾಲಕಿ

Untitled design 2026 07 11T173757.843

ಹುಬ್ಬಳ್ಳಿ (ಜುಲೈ 11) : ವಾಣಿಜ್ಯ ನಗರಿ  ಎಂದೇ ಖ್ಯಾತವಾಗಿರುವ  ಹುಬ್ಬಳ್ಳಿಯಲ್ಲಿ ಇಡೀ ಸಮಾಜವೇ ತಲೆತಗ್ಗಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.ಸದ್ಯ ಬಾಲಕಿಯನ್ನು   ಹುಬ್ಬಳ್ಳಿಯ  ಕಿಮ್ಸ್  ಆಸ್ಪತ್ರೆಯಲ್ಲಿ   ದಾಖಲಿಸಲಾಗಿದ್ದು,  ತಾಯಿ ಮತ್ತು  ನವಜಾತ ಶಿಶುವಿಗೆ ಮಕ್ಕಳ ತೀವ್ರ ನಿಗಾ ಘಟಕ (NICU)ದಲ್ಲಿ ವಿಶೇಷ ಆರೈಕೆ ನೀಡಲಾಗುತ್ತಿದೆ.

ಮೂಲಗಳ ಪ್ರಕಾರ, ಜುಲೈ 8ರಂದು ಬಾಲಕಿಗೆ ಮನೆಯಲ್ಲಿಯೇ ಹೆರಿಗೆಯಾಗಿದೆ, ಎಂದು ಹೇಳಲಾಗಿದೆ. ಹೆರಿಗೆಯ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ  ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಬಾಲಕಿಯ ವಯಸ್ಸು ಅತಿ ಕಡಿಮೆ ಹಾಗೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಅಪ್ರಾಪ್ತ ವಯಸ್ಸಿನ ಹಿನ್ನೆಲೆಯಲ್ಲಿ ಬಾಲಕಿಗೆ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ವೈದ್ಯರ ಮಾಹಿತಿ ಪ್ರಕಾರ, ತಾಯಿ( ಬಾಲಕಿ) ಮತ್ತು ನವಜಾತ ಶಿಶು ಇಬ್ಬರು ಆರೋಗ್ಯವಾಗಿದ್ದು, ಮಗುವಿನ ಆರೋಗ್ಯದ ಮೇಲೆ ವೈದ್ಯರು ನಿರಂತರ ನಿಗಾ ವಹಿಸಿದ್ದಾರೆ.

ಈ ಪ್ರಕರಣದ ಮತ್ತೊಂದು ಆತಂಕಕಾರಿ ಅಂಶವೆಂದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯೊಂದಿಗೆ ಸದ್ಯಕ್ಕೆ ಆಕೆಯ ಪಾಲಕರು ಯಾರೂ ಇಲ್ಲ ಎನ್ನಲಾಗಿದೆ. ಬಾಲಕಿ ಹೇಗೆ ಗರ್ಭಿಣಿಯಾದಳು, ಈ ಘಟನೆಯ ಹಿಂದೆ ಯಾರು ಇದ್ದಾರೆ ಎಂಬ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣದ ಗಂಭೀರತೆಯನ್ನು ಗಮನಿಸಿ ಆಸ್ಪತ್ರೆ ಆಡಳಿತವು ತಕ್ಷಣವೇ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಕುರಿತು ಕಿಮ್ಸ್ ಪ್ರಭಾರ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ ಪ್ರತಿಕ್ರಿಯಿಸಿ, “14 ವರ್ಷದ ಬಾಲಕಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಆಕೆ ತೀವ್ರ ಮಾನಸಿಕ ಆಘಾತದಲ್ಲಿದ್ದಾಳೆ. ಆದ್ದರಿಂದ ಸದ್ಯಕ್ಕೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಬಾಲಕಿ ಮತ್ತು ಮಗುವಿನ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ನವಜಾತ ಶಿಶುವಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ರಕ್ಷಣಾ ಘಟಕ, ನಿರ್ಭಯಾ ವಾರ್ಡ್ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡ ಬಾಲಕಿಗೆ ಅಗತ್ಯ ಆರೈಕೆ ಮತ್ತು ಮಾನಸಿಕ ಧೈರ್ಯ ನೀಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

Exit mobile version