ಆನೇಕಲ್: ಸಾಲದ ಬಾಧೆಯಿಂದ ಬೇಸತ್ತ ಯುವಕನೋರ್ವ ತನ್ನ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಸೀಳಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಮಲ್ಲೇನಹಳ್ಳಿಯ ನಿವಾಸಿ ಮೋಹನ್ ಗೌಡ (27) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈ ಘಟನೆಯಲ್ಲಿ ಮೋಹನ್ ಗೌಡನ ತಾಯಿ ಆಶಾ (55) ಮತ್ತು ಅಕ್ಕ ವರ್ಷಿತಾ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಕ್ಕನ ಮಗ ಮಯಾಂಕ್ (11) ಮತ್ತು ಸ್ವತಃ ಮೋಹನ್ ಗೌಡ ಕುತ್ತಿಗೆ ಸೀಳಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆಗೂ ಮುನ್ನ ಶನಿವಾರ ರಾತ್ರಿ ಮೋಹನ್ ಗೌಡ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದ. ಈ ವಿಡಿಯೋವನ್ನು ತನ್ನ ಸಂಬಂಧಿಕರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದ. ಇದನ್ನು ಕಂಡು ಆತಂಕಗೊಂಡ ಸಂಬಂಧಿಕರು ತಕ್ಷಣವೇ ಮಲ್ಲೇನಹಳ್ಳಿಯ ಮನೆಗೆ ಧಾವಿಸಿದ್ದಾರೆ. ಮನೆಗೆ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅನುಮಾನಗೊಂಡು ಬಾಗಿಲು ಮುರಿದು ಒಳಹೋದಾಗ ಸಂಬಂಧಿಕರು ದಂಗಾಗಿದ್ದಾರೆ. ಆಶಾ ಮತ್ತು ವರ್ಷಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೋಹನ್ ಮತ್ತು ಬಾಲಕ ಮಯಾಂಕ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಕೂಡಲೇ ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾತ್ ಅವರು ಪ್ರಾಥಮಿಕ ತನಿಖೆಯ ಮಾಹಿತಿ ನೀಡಿದ್ದಾರೆ. ಮೋಹನ್ ಗೌಡ ಚೀಟಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ದೊಡ್ಡ ಮಟ್ಟದ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಜೊತೆಗೆ ಐಷಾರಾಮಿ ಜೀವನಕ್ಕಾಗಿ ಮಾಡಿದ್ದ ದುಂದುವೆಚ್ಚವೂ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿರಬಹುದು. ಸಾಲಗಾರರ ಕಾಟ ತಾಳಲಾರದೆ ಇಡೀ ಕುಟುಂಬವೇ ಆತ್ಮಹತ್ಯೆಗೆ ನಿರ್ಧರಿಸಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿ ಮೋಹನ್ ಮೊದಲು ತನ್ನ ಕುಟುಂಬಸ್ಥರ ಕುತ್ತಿಗೆ ಸೀಳಿ, ನಂತರ ತಾನೂ ಅದೇ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಾಲದ ಸುಳಿವು ಮತ್ತು ಕುಟುಂಬದ ಆಂತರಿಕ ಕಲಹದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
