ಇರಾನ್ ಸುತ್ತಲೂ ಅತಿ ದೊಡ್ಡ ಸೈನಿಕ ಜಮಾವಣೆ ಮಾಡಿದ ಅಮೆರಿಕ

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಈಗ ಸ್ಫೋಟದ ಹಂತಕ್ಕೆ ತಲುಪಿದೆ. ಇರಾನ್ ಮೇಲೆ ಒತ್ತಡ ಹೇರುವ ತಂತ್ರದ ಭಾಗವಾಗಿ ಅಮೆರಿಕ ,ಇರಾನ್ ಸುತ್ತಲೂ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಸೈನಿಕ ಜಮಾವಣೆಯನ್ನು ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಕಂಡುಬರದ ಮಟ್ಟದ ಯುದ್ಧ ಸನ್ನದ್ಧತೆಯನ್ನು ಅಮೆರಿಕ ಪ್ರದರ್ಶಿಸುತ್ತಿದ್ದು, ಇಡೀ ವಿಶ್ವದ ಗಮನ ಈಗ ಪಶ್ಚಿಮ ಏಷ್ಯಾದತ್ತ ನೆಟ್ಟಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿದ ಮಾಹಿತಿಯ ಪ್ರಕಾರ, ಅಮೆರಿಕ ನೌಕಾಪಡೆಯ ಅತ್ಯಂತ ಶಕ್ತಿಶಾಲಿ ಯುದ್ಧನೌಕೆ ‘ಯುಎಸ್ಎಸ್ ಟ್ರಿಪೋಲಿ’ (USS Tripoli) ಈಗ ಪಶ್ಚಿಮ ಏಷ್ಯಾದ ಸಮುದ್ರದ ಹಾದಿಯನ್ನು ಪ್ರವೇಶಿಸಿದೆ. ಈ ನೌಕೆಯೊಂದಿಗೆ 3,500ಕ್ಕೂ ಹೆಚ್ಚು ಮರೀನ್ ಕಮಾಂಡೋಗಳು ಮತ್ತು ನುರಿತ ಸೈಲರ್‌ಗಳನ್ನು ರವಾನಿಸಲಾಗಿದೆ. ಇದು ಕೇವಲ ರಕ್ಷಣಾತ್ಮಕ ಕ್ರಮವಲ್ಲ, ಬದಲಾಗಿ ಇರಾನ್ ಮೇಲೆ ನೇರವಾದ ಸೇನಾ ಒತ್ತಡ ಹೇರುವ ಹಂತ ಎಂದು ವಿಶ್ಲೇಷಿಸಲಾಗುತ್ತಿದೆ.

20 ವರ್ಷಗಳಲ್ಲೇ ಅತಿ ದೊಡ್ಡ ಸೇನಾ ರವಾನೆ

ಕಳೆದ 20 ವರ್ಷಗಳಲ್ಲಿ ಅಮೆರಿಕದಿಂದ ಪಶ್ಚಿಮ ಏಷ್ಯಾಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನು ರವಾನಿಸಿರಲಿಲ್ಲ. ಈಗಾಗಲೇ ಸುಮಾರು 50 ಸಾವಿರಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಪಶ್ಚಿಮ ಏಷ್ಯಾದ ವಿವಿಧ ನೆಲೆಗಳಲ್ಲಿ ಠಿಕಾಣಿ ಹೂಡಿದ್ದಾರೆ. ಕೇವಲ ಸೈನಿಕರಷ್ಟೇ ಅಲ್ಲದೆ, ನೂರಾರು ಸುಧಾರಿತ ಯುದ್ಧ ವಿಮಾನಗಳನ್ನು ಕೂಡ ಯುದ್ಧಭೂಮಿಗೆ ಸಜ್ಜಾಗುವಂತೆ ನಿಯೋಜಿಸಲಾಗಿದೆ. ಸೈನಿಕರಿಗೆ ಮರುಭೂಮಿಯ ಯುದ್ಧಕ್ಕೆ ಪೂರಕವಾದ ವಿಶೇಷ ಹೆಲ್ಮೆಟ್ ಮತ್ತು ಗಾಗಲ್ಸ್‌ಗಳನ್ನು ಒದಗಿಸಿರುವುದು, ಅಮೆರಿಕ ಯಾವುದೇ ಕ್ಷಣದಲ್ಲೂ ಕಾರ್ಯಾಚರಣೆಗೆ ಇಳಿಯಬಹುದು ಎಂಬ ಸೂಚನೆಯನ್ನು ನೀಡುತ್ತಿದೆ.

ಒಂದೆಡೆ ಇರಾನ್ ಜೊತೆಗೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದ್ದರೂ, ಅಮೆರಿಕ ಮಾತ್ರ ಸೈನ್ಯದ ಬಲದ ಮೂಲಕ ಇರಾನ್ ಅನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಅಣುಶಕ್ತಿ ಒಪ್ಪಂದ ಅಥವಾ ಪ್ರಾದೇಶಿಕ ಭದ್ರತೆಯ ವಿಷಯದಲ್ಲಿ ಇರಾನ್ ಅನ್ನು ಬಗ್ಗಿಸಲು ಅಮೆರಿಕ ಈ ‘ಮಿಲಿಟರಿ ಪ್ರೆಶರ್’ ತಂತ್ರವನ್ನು ಬಳಸುತ್ತಿದೆ. ಈ ಬೃಹತ್ ಸೈನಿಕ ಜಮಾವಣೆಯು ಕೇವಲ ಎಚ್ಚರಿಕೆಯೋ ಅಥವಾ ಯುದ್ಧದ ಮುನ್ಸೂಚನೆಯೋ ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

Exit mobile version