ಬೆಂಗಳೂರು: ಸಿಲಿಕಾನ್ ಸಿಟಿಯ ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ (APU) ಈಗ ವಿವಾದದ ಕೇಂದ್ರಬಿಂದುವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲಾಗಿದೆ ಹಾಗೂ ದೇಶವಿರೋಧಿ ಚಿಂತನೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಇಂದು (ಫೆ.24) ಬೃಹತ್ ಪ್ರತಿಭಟನೆ ನಡೆಸಿದರು.
ಘಟನೆಯ ಹಿನ್ನೆಲೆ
ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಫೆಸ್ಟ್ನ ಭಾಗವಾಗಿ ‘ಸ್ಪಾರ್ಕ್’ (Spark) ಎಂಬ ಸಂಘಟನೆಯು ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಕಾಶ್ಮೀರ ವಿಷಯ ಹಾಗೂ ಭಾರತದ ಪ್ರತ್ಯೇಕತೆಯ ಕುರಿತು ಚರ್ಚೆ ನಡೆಸಲಾಗಿದೆ ಮತ್ತು ಭಾರತೀಯ ಸೇನೆಯ ಘನತೆಗೆ ಕುಂದು ತರುವಂತಹ ಮಾತುಗಳನ್ನಾಡಲಾಗಿದೆ ಎಂಬುದು ಎಬಿವಿಪಿ ಕಾರ್ಯಕರ್ತರ ಗಂಭೀರ ಆರೋಪ. ಈ ಹಿಂದೆ ಕೂಡ ‘ಸ್ಪಾರ್ಕ್’ ಸಂಘಟನೆಯು ಇಂತಹ ವಿವಾದಿತ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನೆಯ ವೇಳೆ ಉದ್ರಿಕ್ತರಾದ ಕಾರ್ಯಕರ್ತರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿದ್ದ ನಾಮಫಲಕಕ್ಕೆ ಕಪ್ಪು ಮಸಿ ಬಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದೇಶವಿರೋಧಿ ಚಟುವಟಿಕೆಗಳಿಗೆ ಅಡ್ಡೆಯಾಗುತ್ತಿರುವ ವಿವಿಗೆ ಧಿಕ್ಕಾರ, ಭಾರತೀಯ ಸೇನೆಯನ್ನು ಅವಮಾನಿಸುವುದು ನಿಲ್ಲಿಸಿ ಎಂದು ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 25, 26 ಮತ್ತು 27 ರಂದು ನಡೆಯಬೇಕಿದ್ದ ಮುಂದಿನ ಕಾರ್ಯಕ್ರಮಗಳ ಕುರಿತು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಗೇ ಸರಿಯಾದ ಮಾಹಿತಿ ಇಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
-
ವಿವಾದಿತ ‘ಸ್ಪಾರ್ಕ್’ ಸಂಘಟನೆಯನ್ನು ತಕ್ಷಣವೇ ವಿಶ್ವವಿದ್ಯಾಲಯದಿಂದ ನಿಷೇಧಿಸಬೇಕು.
-
ಭಾರತೀಯ ಸೇನೆಗೆ ಮತ್ತು ದೇಶದ ಜನತೆಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಬಹಿರಂಗವಾಗಿ ಕ್ಷಮೆಯಾಚಿಸಬೇಕು.
-
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸರ್ಜಾಪುರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಗಲಾಟೆ ನಡೆಸಿ, ವಿವಿಯ ಆಸ್ತಿಗೆ ಹಾನಿ ಮಾಡಲು ಯತ್ನಿಸಿದ 20ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ವಿಶ್ವವಿದ್ಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸಮಾಜ ಸೇವೆಯಲ್ಲಿ ದೊಡ್ಡ ಹೆಸರು ಮಾಡಿರುವ ಅಜೀಂ ಪ್ರೇಮ್ಜಿ ಅವರ ಹೆಸರಿನ ವಿಶ್ವವಿದ್ಯಾಲಯದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.




