ವಿಶ್ವ ಮಾನಸಿಕ ಆರೋಗ್ಯ ದಿನ: ಅತಿಯಾಗಿ ಬಳಲಬೇಡಿ, ದಿನಕ್ಕೆ 20 ನಿಮಿಷ ಧ್ಯಾನ ಮಾಡಿ!

ಅತಿಯಾಗಿ ಬಳಲಬೇಡಿ, ಇಷ್ಟು ಮಾಡಿದರೆ ಸಾಕು: ಗುರುದೇವ ಶ್ರೀ ಶ್ರೀ ರವಿ ಶಂಕರ್

Untitled design 2026 10 10T114617.434

ನಿಜಕ್ಕೂ ಒತ್ತಡ ಎಂದರೇನು? ನಾವು ಅದನ್ನು ಹೀಗೆ ವ್ಯಾಖ್ಯಾನಿಸುತ್ತೇವೆ. ಮಾಡಬೇಕಾದ ಕೆಲಸ ತುಂಬಾ ಇರುವುದು, ಆದರೆ ಬಹಳ ಕಡಿಮೆ ಸಮಯ ಮತ್ತು ಅದನ್ನು ಮಾಡಲು ಬೇಕಾದ ಶಕ್ತಿಯು ಇಲ್ಲದಿರುವುದು. ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿದಾಗ, ಒತ್ತಡವು ನಿಮ್ಮ ಶಕ್ತಿಯನ್ನು ಎಷ್ಟರ ಮಟ್ಟಿಗೆ ಹೀರಿ ಬಿಡುತ್ತದೆ ಎಂದರೆ, ದಿನ ಆರಂಭವಾಗುವ ಮೊದಲೇ ನಿಮಗೆ ಸಂಪೂರ್ಣವಾಗಿ ದಣಿದಂತೆ ಭಾಸವಾಗುತ್ತದೆ. ಇದನ್ನೇ ನೀವು ‘ಬರ್ನ್‌ಔಟ್’ ಎಂದು ಕರೆಯುತ್ತೀರಿ. ಇದರಿಂದ ಹೊರಬರುವುದು ಹೇಗೆ?

ನೀವು ಕೆಲಸದ ಹೊರೆಯನ್ನು ಕಡಿಮೆ ಮಾಡಬಹುದು, ಆದರೆ ಇಂದಿನ ದಿನಗಳಲ್ಲಿ ಅದು ಸಾಧ್ಯವಾಗುವಂತೆ ಕಾಣುವುದಿಲ್ಲ. ಅಥವಾ ಲಭ್ಯವಿರುವ ಸಮಯವನ್ನು ಹೆಚ್ಚಿಸಬಹುದು, ಆದರೆ ಅದೂ ಅಸಂಭವವೆಂದು ತೋರುತ್ತದೆ. ಹಾಗಾಗಿ ನಮ್ಮ ಮುಂದೆ ಉಳಿಯುವ ಏಕೈಕ ಆಯ್ಕೆ ಎಂದರೆ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು. ನಮ್ಮಲ್ಲಿ ಸಾಕಷ್ಟು ಶಕ್ತಿ ಮತ್ತು ಉತ್ಸಾಹವಿದ್ದಾಗ, ಯಾವುದೇ ಸವಾಲನ್ನು ಎದುರಿಸಲು ಮತ್ತು ನಿಭಾಯಿಸಲು ನಮಗೆ ಸಾಧ್ಯವಾಗುತ್ತದೆ.

ನಾವು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲಿಯೇ ಧ್ಯಾನ ಮತ್ತು ಸುದರ್ಶನ ಕ್ರಿಯೆಯಂತಹ ಉಸಿರಾಟದ ತಂತ್ರಗಳು ನಮಗೆ ಅಪಾರವಾಗಿ ಸಹಾಯ ಮಾಡುತ್ತವೆ. ಈ ಎಲ್ಲ ಪ್ರಕ್ರಿಯೆಗಳು ಕೆಲವೇ ನಿಮಿಷಗಳಲ್ಲಿ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತವೆ.

ನಿದ್ರೆ ಮುಖ್ಯವೇ ಸರಿ, ಆದರೆ ನಿದ್ರೆಯಿಂದ ದೊರೆಯುವ ವಿಶ್ರಾಂತಿ ಒಂದು ರೀತಿಯ ಮಂದವಾದ ವಿಶ್ರಾಂತಿಯಾಗಿದೆ. ಧ್ಯಾನದಿಂದ ದೊರೆಯುವುದು ಪ್ರಜ್ಞಾಪೂರ್ವಕವಾದ ವಿಶ್ರಾಂತಿ.

ಧ್ಯಾನ ಎಂದರೆ ಸುಮ್ಮನೆ ಕುಳಿತು ಏನನ್ನೋ ಯೋಚಿಸುವುದಲ್ಲ. ಅನೇಕರು ಧ್ಯಾನ ಮಾಡಲು ಕುಳಿತಾಗ ಮನಸ್ಸಿಗೆ ಬಹಳಷ್ಟು ಕೆಲಸ ಕೊಡುತ್ತಿರುತ್ತಾರೆ. ಯಾವುದನ್ನೋ ಕಲ್ಪಿಸಿಕೊಳ್ಳುವುದು, ಮತ್ಯಾವುದನ್ನೋ ದೃಶ್ಯೀಕರಿಸಿಕೊಳ್ಳುವುದು, ಹೀಗೆ. ದುರದೃಷ್ಟವಶಾತ್, ಅದು ಧ್ಯಾನವಲ್ಲ. ಧ್ಯಾನ ಎಂದರೆ ಎಲ್ಲಾ ಯೋಚನೆಗಳನ್ನು, ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಮತ್ತು ವಿಶ್ರಾಮ ಮಾಡುವುದು. 8 – 10 ಗಂಟೆಗಳ ನಿದ್ರೆಗಿಂತ 20 ನಿಮಿಷಗಳ ಧ್ಯಾನದಲ್ಲಿ ಹೆಚ್ಚು ಚೈತನ್ಯವನ್ನು ಜನರು ಅನುಭವಿಸಿದ್ದಾರೆ.

ಚೈತನ್ಯ ಶಕ್ತಿಯನ್ನು ಪಡೆಯುವ ನಾಲ್ಕು ಪ್ರಮುಖ ಮೂಲಗಳಿವೆ: ಆಹಾರ, ನಿದ್ರೆ, ಉಸಿರಾಟ ಮತ್ತು ಶಾಂತವಾದ, ಧ್ಯಾನಸ್ಥ ಮನಸ್ಸಿನ ಸ್ಥಿತಿ. ಸಮತೋಲಿತವಾದ, ಪೌಷ್ಟಿಕ ಆಹಾರವನ್ನು ಮಿತವಾಗಿ ಸೇವಿಸುವುದು. 6 ರಿಂದ 8 ಗಂಟೆಗಳಷ್ಟು ಕಾಲ ನಿದ್ರೆ ಮಾಡುವುದು; ಅದಕ್ಕಿಂತ ಹೆಚ್ಚೂ ಅಲ್ಲ, ಕಮ್ಮಿಯೂ ಅಲ್ಲ. ಕೆಲವು ಆಳವಾದ ಉಸಿರಾಟದ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡುವುದು ಮತ್ತು ಬೆಳಿಗ್ಗೆ ಹಾಗೂ ಸಂಜೆ 15–20 ನಿಮಿಷಗಳ ಕಾಲ ಧ್ಯಾನ ಮಾಡುವುದು. ಇಷ್ಟನ್ನು ಮಾಡುತ್ತಾ ಬಂದರೆ, ಇಡೀ ದಿನ ಚೈತನ್ಯದಿಂದ ತುಂಬಿರುತ್ತದೆ. ತಕ್ಷಣವೇ ನಿಮ್ಮ ಶಕ್ತಿಯ ಮಟ್ಟದಲ್ಲಿ ಆಗುವ ವ್ಯತ್ಯಾಸವನ್ನು ನೀವು ಗಮನಿಸುತ್ತೀರಿ. ಆಧ್ಯಾತ್ಮಿಕ ಜ್ಞಾನವೂ ನಿಮಗೆ ವಿಭಿನ್ನ ರೀತಿಯ ಶಕ್ತಿಯನ್ನು ನೀಡುತ್ತದೆ, ಹಾಗೂ ಧ್ಯಾನದಿಂದ ಸಿಗುವ ಶಕ್ತಿಯು ಖಂಡಿತವಾಗಿಯೂ ಇವೆಲ್ಲದಕ್ಕಿಂತಲೂ ಮಿಗಿಲಾದದ್ದು.

ಧ್ಯಾನದ ಹೊರತಾಗಿ, ಭಾವನೆಗಳು ಬುದ್ಧಿಶಕ್ತಿಯನ್ನು ಆವರಿಸಿದಾಗ, ಸಮತೋಲನವನ್ನು ಮರಳಿ ಪಡೆಯಲು ಉಸಿರಾಟವು ಒಂದು ಪ್ರಾಯೋಗಿಕ ಸಾಧನವಾಗಬಹುದು. ಭಾವನೆಗಳ ಪ್ರವಾಹದಿಂದ ಹೊರಬರಲು ಸುದರ್ಶನ ಕ್ರಿಯೆ ಅಪಾರವಾಗಿ ಸಹಾಯ ಮಾಡುತ್ತದೆ. ನಕಾರಾತ್ಮಕ ಭಾವನೆಗಳನ್ನು ನಿಯಂತ್ರಣದಲ್ಲಿಡಲು ಅದು ಒಂದು ಆಟೋಮೇಟಿಕ್ ವಾಲ್ವ್ ನಂತೆ ಕಾರ್ಯನಿರ್ವಹಿಸುತ್ತದೆ.

Exit mobile version