ಚಳಿಗಾಲ ಬಂತು ಅಂದರೆ ತಂಪು, ಜ್ವರ, ಚರ್ಮದ ಒಣಗುವಿಕೆ ಮುಂತಾದವು ಸಹಜ. ಆದರೆ ಸರಿಯಾದ ಆಹಾರ ಸೇವನೆಯಿಂದ ಈ ಋತುಮಾನವನ್ನು ಸುಲಭವಾಗಿ ಎದುರಿಸಬಹುದು. ಪ್ರತ್ಯೇಕ ಆಹಾರ ಪಟ್ಟಿ ಬೇಡ, ನಿತ್ಯದ ಊಟದಲ್ಲೇ ಕೆಲವು ಪದಾರ್ಥಗಳಿಗೆ ಆದ್ಯತೆ ನೀಡಿದರೆ ಸಾಕು. ಇವು ದೇಹದ ಉಷ್ಣತೆ ಕಾಯ್ದುಕೊಳ್ಳಿ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ, ಚಳಿಯಿಂದ ರಕ್ಷಣೆ ನೀಡುತ್ತವೆ.
ಊಟದ ತಟ್ಟೆಯಲ್ಲಿ ಹಸಿರು ಬಣ್ಣ ಹೆಚ್ಚಿರಲಿ
ಮೆಂತೆ, ಪಾಲಕ್, ಹೊನಗನ್ನೆ, ದಂಟು ಮುಂತಾದ ಹಸಿರು ಸೊಪ್ಪುಗಳು ಚಳಿಗಾಲದ ಸೂಪರ್ ಫುಡ್‌ಗಳು. ಕ್ಯಾಪ್ಸಿಕಂ, ಬೆಂಡೆಕಾಯಿ, ಎಲೆಕೋಸು, ಬ್ರೊಕೊಲಿ ಮುಂತಾದ ತರಕಾರಿಗಳು ದೇಹಕ್ಕೆ ಪೌಷ್ಟಿಕಾಂಶ ನೀಡುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.
ಲಾಭ: ಹಸಿರು ತರಕಾರಿಗಳಲ್ಲಿ ಬೀಟಾ ಕ್ಯಾರೊಟಿನ್, ಕಬ್ಬಿಣ, ಫೋಲೇಟ್ ಮುಂತಾದ ಅಂಶಗಳು ಸಮೃದ್ಧ. ಇವು ಕೆಂಪು ರಕ್ತಕಣಗಳ ಉತ್ಪಾದನೆಗೆ ಅಗತ್ಯವಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ನಾರಿನಂಶವೂ ಹೆಚ್ಚು ಇರುವುದರಿಂದ ಜೀರ್ಣಾಂಗದ ಆರೋಗ್ಯ ಸುಧಾರಿಸುತ್ತದೆ.
ಗಡ್ಡೆ-ಗೆಣಸುಗಳ ಮಹತ್ವ
ಚಳಿಗಾಲವೆಂದರೆ ಗೆಣಸು, ಬೀಟ್‌ರೂಟ್, ಕ್ಯಾರೆಟ್, ಶುಂಠಿ, ಸುವರ್ಣಗಡ್ಡೆ ಮುಂತಾದ ಬೇರು ತರಕಾರಿಗಳ ಕಾಲ. ಇವು ಪೌಷ್ಟಿಕಾಂಶದ ಖಜಾನೆಗಳು.
ಲಾಭ: ಗೆಣಸು ಸಿಪ್ಪೆ ಸಮೇತ ತಿಂದರೆ ವಿಟಮಿನ್ ಎ ಅಂಶ ಹೆಚ್ಚಾಗುತ್ತದೆ. ಬೀಟ್‌ರೂಟ್ ಮತ್ತು ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೊಟಿನ್ ದೊರೆಯುತ್ತದೆ. ಇವು ಶರೀರದ ಉಷ್ಣತೆ ಕಾಯ್ದುಕೊಳ್ಳಲು ಸಹಕಾರಿ. ಗಡ್ಡೆ ತರಕಾರಿಗಳಲ್ಲಿರುವ ಸ್ವಲ್ಪ ಹೆಚ್ಚಾದ ಕ್ಯಾಲರಿ ಚಳಿಗಾಲದಲ್ಲಿ ದೇಹಕ್ಕೆ ಬೇಕಾದ ಶಕ್ತಿಯನ್ನು ಪೂರೈಸುತ್ತದೆ.
ಇಡೀ ಧಾನ್ಯಗಳು–ಶಕ್ತಿ ತುಂಬಿದ ಆಹಾರ
ಜೋಳ, ರಾಗಿ, ಸಜ್ಜೆ ಮುಂತಾದ ಸಿರಿ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಸಂಸ್ಕರಿಸದ ಇಡೀ ಧಾನ್ಯಗಳಲ್ಲಿ ನಾರಿನಂಶ, ಕಬ್ಬಿಣ, ಜಿಂಕ್, ತಾಮ್ರ ಮುಂತಾದ ಖನಿಜಗಳು ಅಧಿಕ.
ಲಾಭ: ಇವು ನಿಧಾನವಾಗಿ ಜೀರ್ಣವಾಗುವುದರಿಂದ ಶರೀರಕ್ಕೆ ದೀರ್ಘಕಾಲದ ಶಕ್ತಿ ದೊರೆಯುತ್ತದೆ. ರಕ್ತದ ಸಕ್ಕರೆ ನಿಯಂತ್ರಣ, ಹೃದಯ ಆರೋಗ್ಯ ಮತ್ತು ಮಧುಮೇಹ ತಡೆಗೆ ಸಹಕಾರಿ. ಇವು ಜೀರ್ಣಾಂಗದಲ್ಲಿ ಉತ್ತಮ ಬ್ಯಾಕ್ಟೀರಿಯ ವೃದ್ಧಿಗೆ ಸಹಾಯಮಾಡುತ್ತವೆ.
ಬೀಜಗಳು ಮತ್ತು ಕಾಯಿಗಳು–ಸಣ್ಣದಲ್ಲೇ ಸತ್ವ
ಬಾದಾಮಿ, ಅಕ್ಕರಕಾಯಿ, ಸೂರ್ಯಕಾಂತಿ ಬೀಜ, ಆಲಸಿ ಬೀಜ, ಸೀಮೆ ಬದನೆ ಬೀಜ ಮುಂತಾದವು ಚಳಿಗಾಲದ ಶ್ರೇಷ್ಠ ಸ್ನ್ಯಾಕ್‌ಗಳು.
ಲಾಭ: ಇವುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಕಡಿಮೆ, ಆದರೆ ಒಳ್ಳೆಯ ಕೊಬ್ಬುಗಳು ಅಧಿಕ. ವಿಟಮಿನ್ ಇ, ಬಿ6, ಮೆಗ್ನೀಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮುಂತಾದ ಅಂಶಗಳಿಂದ ಸಮೃದ್ಧ. ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಸಹಕಾರಿ.
ಸಾಂಬಾರ ಪದಾರ್ಥಗಳು–ರುಚಿಯಲ್ಲೇ ಆರೋಗ್ಯ
ಬೆಳ್ಳುಳ್ಳಿ, ಶುಂಠಿ, ಅರಿಶಿನ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಕಾಳುಮೆಣಸು ಮುಂತಾದ ಮಸಾಲೆ ಪದಾರ್ಥಗಳು ಚಳಿಗಾಲದಲ್ಲಿ ದೇಹವನ್ನು ಉಷ್ಣವಾಗಿರಿಸಲು ಸಹಾಯಕ.
ಲಾಭ: ಅರಿಶಿನವು ಶಕ್ತಿಶಾಲಿ ಉತ್ಕರ್ಷಣ ನಿರೋಧಕ; ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬೆಳ್ಳುಳ್ಳಿ ಸೋಂಕು ನಿವಾರಕ, ಶುಂಠಿ ಜೀರ್ಣಾಂಗ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದ ಸಕ್ಕರೆಯ ನಿಯಂತ್ರಣದಲ್ಲಿಡುತ್ತದೆ.
