ಇತ್ತೀಚಿನ ದಿನಗಳಲ್ಲಿ ನಗರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿದ್ದು, ಅದರ ಪರಿಣಾಮವಾಗಿ ಜನರಲ್ಲಿ ನಿದ್ರೆ ಸಂಬಂಧಿತ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಒತ್ತಡಭರಿತ ಕೆಲಸದ ಪರಿಸ್ಥಿತಿ, ಅತಿಯಾದ ಸ್ಕ್ರೀನ್ ಸಮಯ ಮತ್ತು ಅಸಮರ್ಪಕ ದಿನಚರಿಯಿಂದಾಗಿ ಹಲವರು ಸರಿಯಾದ ನಿದ್ರೆ ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ನಿದ್ರೆ ಮಾನವ ದೇಹಕ್ಕೆ ಅತ್ಯಗತ್ಯವಾದ ಅಂಶ. ಸರಿಯಾದ ಆಹಾರ ಎಷ್ಟು ಮುಖ್ಯವೋ, ಅದೇ ರೀತಿ ಸಮರ್ಪಕ ನಿದ್ರೆ ಕೂಡ ಆರೋಗ್ಯವನ್ನು ಕಾಪಾಡಲು ಅಗತ್ಯ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ, ಜನರು ರಾತ್ರಿ ಹೊತ್ತು ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಿಂದ ದೇಹದ ನೈಸರ್ಗಿಕ ನಿದ್ರೆ ಚಕ್ರವೇ ಅಸ್ತವ್ಯಸ್ತವಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ರಾತ್ರಿ ಪಾಳಿ ಕೆಲಸ, ಟ್ರಾಫಿಕ್ ಒತ್ತಡ ಮತ್ತು ಡಿಜಿಟಲ್ ಜೀವನಶೈಲಿ ಜನರ ನಿದ್ರೆ ಪದ್ಧತಿಯನ್ನು ಹಾಳು ಮಾಡುತ್ತಿದೆ.
ತಜ್ಞರ ಪ್ರಕಾರ, ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಬರುವ ‘ನೀಲಿ ಬೆಳಕು’ (Blue Light) ನಿದ್ರೆಯನ್ನು ನಿಯಂತ್ರಿಸುವ ಮೆಲಟೊನಿನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದ ಸರ್ಕೇಡಿಯನ್ ರಿದಮ್ (Circadian Rhythm) ಅಸ್ಥಿರವಾಗುತ್ತದೆ. ಇದರಿಂದ ನಿದ್ರೆ ಬರುವ ಸಮಯ ತಡವಾಗುತ್ತದೆ ಮತ್ತು ನಿದ್ರೆಯ ಗುಣಮಟ್ಟ ಕುಸಿಯುತ್ತದೆ..
ಇದರ ಜೊತೆಗೆ, ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರಂತರವಾಗಿ ಸಿನಿಮಾ ಮತ್ತು ವೆಬ್ ಸೀರಿಸ್‌ಗಳನ್ನು ವೀಕ್ಷಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸ್ಕ್ರೋಲಿಂಗ್ ಮಾಡುವುದು ಮೆದುಳಿಗೆ ವಿಶ್ರಾಂತಿ ನೀಡುವುದಿಲ್ಲ. ಇದರಿಂದ ಮನಸ್ಸು ಶಾಂತವಾಗದೆ, ಸುಲಭವಾಗಿ ನಿದ್ರೆ ಬರುವುದಕ್ಕೆ ಅಡಚಣೆ ಉಂಟಾಗುತ್ತದೆ.
ನಿದ್ರೆಯ ಕೊರತೆಯ ದುಷ್ಪರಿಣಾಮಗಳು
ದೀರ್ಘಕಾಲದ ನಿದ್ರಾಹೀನತೆಯು ಕೇವಲ ಆಯಾಸಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ದೇಹದಲ್ಲಿ ಅನೇಕ ಗಂಭೀರ ಕಾಯಿಲೆಗಳಿಗೆ ನಾಂದಿ ಹಾಡುತ್ತದೆ.
-
ದೀರ್ಘಕಾಲೀನ ಕಾಯಿಲೆಗಳು: ಬೊಜ್ಜು, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
-
ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ: ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಕೆಲಸದಲ್ಲಿ ಉತ್ಪಾದಕತೆ ಕುಸಿಯುತ್ತದೆ.
-
ದೈನಂದಿನ ಸಮಸ್ಯೆಗಳು: ತಲೆನೋವು, ದೌರ್ಬಲ್ಯ, ಸುಸ್ತು ಮತ್ತು ಕಿರಿಕಿರಿ ಸ್ವಭಾವ ಸಾಮಾನ್ಯ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.
ಸಿಹಿ ನಿದ್ರೆಗಾಗಿ ಸರಳ ಮಂತ್ರಗಳು
ವೈದ್ಯರ ಪ್ರಕಾರ, ನಿದ್ರೆಯನ್ನು ಸುಧಾರಿಸಲು ದೊಡ್ಡದಾದ ಔಷಧಿಗಳ ಅಗತ್ಯವಿಲ್ಲ. ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಾಕು:
-
ಸಮಯಪಾಲನೆ : ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಎದ್ದೇಳುವ ಅಭ್ಯಾಸ ಮಾಡಿ. ರಜಾ ದಿನಗಳಲ್ಲೂ ಇದನ್ನು ಪಾಲಿಸಿ.
-
ಡಿಜಿಟಲ್ ಡಿಟಾಕ್ಸ್ : ಮಲಗುವ ಒಂದು ಗಂಟೆ ಮೊದಲು ಎಲ್ಲಾ ರೀತಿಯ ಸ್ಕ್ರೀನ್ ಗಳ (ಮೊಬೈಲ್, ಟಿವಿ, ಲ್ಯಾಪ್‌ಟಾಪ್) ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಆ ಸಮಯದಲ್ಲಿ ಪುಸ್ತಕ ಓದಿ ಅಥವಾ ಲಘು ಸಂಗೀತ ಕೇಳಿ.
-
ವಾತಾವರಣ : ಮಲಗುವ ಕೊಠಡಿ ಕತ್ತಲೆ, ಶಾಂತ ಮತ್ತು ತಂಪಾಗಿರುವಂತೆ ನೋಡಿಕೊಳ್ಳಿ.
-
ಜೀವನಶೈಲಿ : ರಾತ್ರಿ ಊಟ ಮಲಗುವ ಕನಿಷ್ಠ 2-3 ಗಂಟೆ ಮೊದಲೇ ಮುಗಿಸಿರಿ. ಕೆಫೀನ್ ಮತ್ತು ಮದ್ಯಪಾನದ ಸೇವನೆಯನ್ನು ಕಡಿಮೆ ಮಾಡಿ.
-
ವ್ಯಾಯಾಮ : ನಿಯಮಿತ ವ್ಯಾಯಾಮವು ದೇಹವನ್ನು ದಣಿಸಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಆದರೆ ಮಲಗುವ ಮುನ್ನ ಭಾರೀ ವ್ಯಾಯಾಮ ಮಾಡಬೇಡಿ.
ನಗರ ಜೀವನದ ಒತ್ತಡವನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಆರೋಗ್ಯಕರ ನಿದ್ರೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಾವು ದೀರ್ಘಕಾಲದ ಕಾಯಿಲೆಗಳಿಂದ ದೂರ ಉಳಿಯಬಹುದು ಮತ್ತು ಉತ್ತಮ ಜೀವನಶೈಲಿಯನ್ನು ನಡೆಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
