ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿಯ ಬೆಲೆ ಈಗ ಬಂಗಾರದಂತೆ ಗಗನಕ್ಕೇರಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ದಾಳಿಯಿಂದ ಕಾಶ್ಮೀರದ ಕೇಸರಿ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಬೆಲೆ ದುಪ್ಪಟ್ಟಾಗಿದೆ. ಕಾಶ್ಮೀರದ ಕೇಸರಿ ಉನ್ನತ ದರ್ಜೆಯದ್ದು ಎಂಬ ಖ್ಯಾತಿಯನ್ನು ಹೊಂದಿದೆ, ಆದರೆ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ರಫ್ತಾಗುತ್ತಿದ್ದ ಕೇಸರಿಯೂ ಅಟ್ಟಾರಿ-ವಾಘಾ ಗಡಿ ಬಂದ್‌ನಿಂದ ಸಿಗದಂತಾಗಿದೆ.
ಕೇಸರಿಯ ಬೆಲೆ ಏರಿಕೆಯ ಕಾರಣ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಿಂದ ಕೇಸರಿ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಲದೇ, ಅಟ್ಟಾರಿ-ವಾಘಾ ಗಡಿಯ ಮೂಲಕ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಆಮದಾಗುತ್ತಿದ್ದ ಕೇಸರಿಯ ಪೂರೈಕೆ ಸ್ಥಗಿತಗೊಂಡಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 55 ಟನ್ ಕೇಸರಿಯ ಬೇಡಿಕೆ ಇದ್ದು, ಪೂರೈಕೆ ಕಡಿಮೆಯಾದ ಕಾರಣ ಬೆಲೆ ಗಗನಕ್ಕೇರಿದೆ. ಪಹಲ್ಯಾಮ್ ದಾಳಿಗೆ ಮೊದಲು ₹1.2 ಲಕ್ಷದಿಂದ ₹2.38 ಲಕ್ಷವಿದ್ದ ಕೇಸರಿಯ ಬೆಲೆ ಈಗ ₹4.5 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆಯಾಗಿದೆ. ಇದು 50 ಗ್ರಾಂ ಚಿನ್ನದ ಬೆಲೆಗೆ ಸಮಾನವಾಗಿದೆ.
ಕೇಸರಿ ಎಂದರೇನು?
ಕೇಸರಿ, ಕ್ರೋಕಸ್ ಸಟೈವಸ್ ಎಂಬ ಹೂವಿನಿಂದ ತಯಾರಾಗುತ್ತದೆ. ಈ ಹೂವಿನ ಮೂರು ಕೆಂಪು ಎಳೆಗಳನ್ನು ಕೈಯಿಂದ ಎಚ್ಚರಿಕೆಯಿಂದ ತೆಗೆಯಲಾಗುತ್ತದೆ. ಒಂದು ಕಿಲೋಗ್ರಾಂ ಕೇಸರಿಯನ್ನು ತಯಾರಿಸಲು ಸುಮಾರು 1.5 ಲಕ್ಷ ಹೂವುಗಳು ಬೇಕಾಗುತ್ತವೆ. ಈ ಕಾರಣದಿಂದಲೇ ಕೇಸರಿಯ ಉತ್ಪಾದನೆ ಶ್ರಮದಾಯಕ ಮತ್ತು ದುಬಾರಿಯಾಗಿದೆ.
ಕೇಸರಿಯ ಪ್ರಯೋಜನಗಳು:
ಕೇಸರಿಯು ಕ್ಯಾರೊಟಿನಾಯ್ಡ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು UV ಕಿರಣಗಳು ಮತ್ತು ಪರಿಸರದ ಒತ್ತಡದಿಂದ ರಕ್ಷಿಸುತ್ತದೆ. ಆಯುರ್ವೇದದಲ್ಲಿ ಕೇಸರಿಯನ್ನು ಆರೋಗ್ಯಕ್ಕೆ ವರದಾನವೆಂದು ಪರಿಗಣಿಸಲಾಗುತ್ತದೆ. ಇದನ್ನು ಆಹಾರ, ಔಷಧ, ಮತ್ತು ಸೌಂದರ್ಯ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಕೇಸರಿಯ ಬೇಡಿಕೆ :
ಭಾರತದಲ್ಲಿ ಕೇಸರಿಯ ಬೇಡಿಕೆ ಅಪಾರವಾಗಿದೆ. ಆದರೆ, ಕಾಶ್ಮೀರದಲ್ಲಿ ಉತ್ಪಾದನೆ ಕಡಿಮೆಯಾಗಿರುವುದು ಮತ್ತು ವಿದೇಶದಿಂದ ರಫ್ತು ಸ್ಥಗಿತಗೊಂಡಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಕೇಸರಿಯ ಗುಣಮಟ್ಟವನ್ನು ಕಾಪಾಡಿಕೊಂಡು ಉತ್ಪಾದನೆಯನ್ನು ಹೆಚ್ಚಿಸುವುದು ಈಗ ಕಾಶ್ಮೀರದ ಕೇಸರಿ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ.