ಸಂಜೆಯ ತಂಪಾದ ವಾತಾವರಣ, ಅದರಲ್ಲೂ ಮಳೆಗಾಲ ಅಥವಾ ಚಳಿಗಾಲ ಬಂತೆಂದರೆ ಬಿಸಿ ಬಿಸಿಯಾದ, ಖಾರವಾದ ಸ್ನಾಕ್ಸ್ ಸೇವಿಸಬೇಕೆಂಬ ಹಂಬಲ ಉಂಟಾಗುವುದು ಸಹಜ. ಸಮೋಸಾ, ಪಕೋಡಾ, ಬಜ್ಜಿ ಅಥವಾ ಮಸಾಲೆಯುಕ್ತ ಚಾಟ್ಸ್‌ಗಳ ವಾಸನೆ ಮೂಗಿಗೆ ಬಡಿದಾಗ ಮನಸ್ಸು ತಡೆಯುವುದೇ ಇಲ್ಲ. ಆದರೆ, ರುಚಿಗೆ ದಾಸರಾಗಿ ನಾವು ಸೇವಿಸುವ ಈ ತಿಂಡಿಗಳು ನಮ್ಮ ದೇಹದ ಒಳಗಿನ ವ್ಯವಸ್ಥೆಯನ್ನು ಹೇಗೆ ಹದಗೆಡಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ ? ಆರೋಗ್ಯ ತಜ್ಞರ ಪ್ರಕಾರ, ಸಂಜೆ 6 ಗಂಟೆಯ ನಂತರ ನಮ್ಮ ದೇಹದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಈ ಸಮಯದಲ್ಲಿ ಸೇವಿಸುವ ಆಹಾರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಸಂಜೆ 6ರ ನಂತರ ಯಾವ ಆಹಾರಗಳು ನಿಷೇಧಿತ ?
ನಾವು ಸಂಜೆಯ ಹೊತ್ತು ರುಚಿಗಾಗಿ ಸೇವಿಸುವ ಈ ಕೆಳಗಿನ ಆಹಾರಗಳು ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆಯ ಮಟ್ಟವನ್ನು ಏಕಾಏಕಿ ಹೆಚ್ಚಿಸಬಹುದು:
-
ಕರಿದ ತಿಂಡಿಗಳು: ಸಮೋಸಾ, ಪಕೋಡಾ, ಮಿರ್ಚಿ ಬಜ್ಜಿ ಮತ್ತು ವಡೆ
-
ಜಂಕ್ ಫುಡ್: ಹೆಚ್ಚಿನ ಬೆಣ್ಣೆ ಮತ್ತು ಚೀಸ್ ಒಳಗೊಂಡಿರುವ ಬರ್ಗರ್, ಪಿಜ್ಜಾ ಹಾಗೂ ಸಂಸ್ಕರಿಸಿದ ಆಹಾರಗಳು
-
ಅತಿಯಾದ ಸಿಹಿ: ಜಲೇಬಿ, ಗುಲಾಬ್ ಜಾಮೂನ್ ಅಥವಾ ಸಕ್ಕರೆ ಅಂಶ ಹೆಚ್ಚಿರುವ ಪೇಸ್ಟ್ರಿಗಳು
-
ಬೀದಿಬದಿ ಆಹಾರ (Street Food): ಅತಿಯಾದ ಮಸಾಲೆ ಮತ್ತು ಎಣ್ಣೆ ಬಳಸಿ ತಯಾರಿಸಿದ ಮಸಾಲಾ ಪುರಿ, ಗೋಬಿ ಮಂಚೂರಿಯನ್ ಇತ್ಯಾದಿ.
ಕರಿದ ತಿಂಡಿಗಳು ದೇಹಕ್ಕೆ ಏಕೆ ಅಪಾಯಕಾರಿ ?
ರಾತ್ರಿ ಹತ್ತಿರವಾಗುತ್ತಿದ್ದಂತೆ ನಮ್ಮ ದೇಹದ ಚಯಾಪಚಯ ಕ್ರಿಯೆ (Metabolism) ನಿಧಾನಗೊಳ್ಳುತ್ತದೆ. ಈ ಸಮಯದಲ್ಲಿ ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವಿಸಿದರೆ ಈ ಕೆಳಗಿನ ತೊಂದರೆಗಳು ಎದುರಾಗುತ್ತವೆ:
-
ಮಧುಮೇಹದ ಅಪಾಯ: ಹುರಿದ ಆಹಾರಗಳು ನೇರವಾಗಿ ಟೈಪ್-2 ಮಧುಮೇಹಕ್ಕೆ ನಾಂದಿ ಹಾಡುತ್ತವೆ. ಇವು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರುಪೇರು ಮಾಡುತ್ತವೆ.
-
ಜೀರ್ಣಕ್ರಿಯೆಯಲ್ಲಿ ವ್ಯತ್ಯಯ: ರಾತ್ರಿಯ ಹೊತ್ತು ಜೀರ್ಣಾಂಗವ್ಯೂಹವು ವಿಶ್ರಾಂತಿಯ ಸ್ಥಿತಿಗೆ ಹೋಗಲು ಸಿದ್ಧವಾಗುತ್ತಿರುತ್ತದೆ. ಆಗ ಕರಿದ ಆಹಾರ ತಿಂದರೆ ಅಸಿಡಿಟಿ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಡುತ್ತವೆ.
-
ಕರುಳಿನ ಆರೋಗ್ಯ: ಅಧ್ಯಯನಗಳ ಪ್ರಕಾರ, ಎಣ್ಣೆಯಲ್ಲಿ ಕರಿದ ಪದಾರ್ಥಗಳು ನಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ, ಉರಿಯೂತವನ್ನು (Inflammation) ಹೆಚ್ಚಿಸುತ್ತವೆ.
-
ತೂಕ ಹೆಚ್ಚಳ: ಇವುಗಳಲ್ಲಿರುವ ಅತಿಯಾದ ಕ್ಯಾಲೋರಿಗಳು ಶಕ್ತಿಯಾಗಿ ಬದಲಾಗುವ ಬದಲು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತವೆ, ಇದು ಬೊಜ್ಜಿಗೆ ಪ್ರಮುಖ ಕಾರಣ.
ಆರೋಗ್ಯಕರ ಪರ್ಯಾಯಗಳು ಯಾವುವು ?
ಸಂಜೆಯ ಹಸಿವನ್ನು ನೀಗಿಸಲು ಕರಿದ ತಿಂಡಿಗಳ ಬದಲು ಈ ಕೆಳಗಿನ ಹೆಲ್ದಿ ಸ್ನಾಕ್ಸ್ ಸೇವಿಸಹುದು
-
ಹುರಿದ ಮಖಾನ: ಬೆಣ್ಣೆ ಅಥವಾ ಎಣ್ಣೆ ಬಳಸದೆ ಹುರಿದ ಮಖಾನಾ (Lotus Seeds) ಅತ್ಯುತ್ತಮ ಆಯ್ಕೆ
-
ಬೇಯಿಸಿದ ಕಾಳುಗಳು: ಉಪ್ಪು ಮತ್ತು ಹಸಿಮೆಣಸಿನಕಾಯಿ ಬೆರೆಸಿದ ಬೇಯಿಸಿದ ಸಿಹಿ ಕಾರ್ನ್ ಅಥವಾ ಹೆಸರುಕಾಳು
-
ಬಿಸಿ ಸೂಪ್: ತರಕಾರಿಗಳಿಂದ ಮಾಡಿದ ಫ್ರೆಶ್ ಸೂಪ್ ದೇಹಕ್ಕೆ ಹಿತ ನೀಡುತ್ತದೆ
-
ಕಡಿಮೆ ಎಣ್ಣೆಯ ಪ್ರೋಟೀನ್: ಅಲ್ಪ ಎಣ್ಣೆ ಬಳಸಿ ಮಾಡಿದ ಪನೀರ್ ಫ್ರೈ ಅಥವಾ ಮಸಾಲೆಯುಕ್ತ ಕಡಲೆ
-
ಆವಿಯಲ್ಲಿ ಬೇಯಿಸಿದ ತಿಂಡಿಗಳು: ಗೋಧಿ ಹಿಟ್ಟಿನಿಂದ ಮಾಡಿದ ಮೋಮೋಸ್ ಅಥವಾ ಡಂಪ್ಲಿಂಗ್ಗಳು
ನಮ್ಮ ಬಾಯಿಯ ರುಚಿಗಿಂತ ದೇಹದ ಆರೋಗ್ಯ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಸೇವಿಸುವ ಮೂಲಕ ದೀರ್ಘಕಾಲಿಕ ಕಾಯಿಲೆಗಳಿಂದ ದೂರವಿರಬಹುದು.
