ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸ್ಮಾರ್ಟ್‌ಫೋನ್ ಇಲ್ಲದೆ ಒಂದು ಕ್ಷಣವೂ ಇರಲಾರದ ಸ್ಥಿತಿಗೆ ತಲುಪಿದ್ದಾರೆ. ಆದರೆ, ಈ ಆನ್‌ಲೈನ್ ಜಗತ್ತು ಕೇವಲ ಜ್ಞಾನದ ಮೂಲವಲ್ಲ, ಬದಲಾಗಿ ಸಾವಿನ ಬಲೆಯೂ ಹೌದು ಎಂಬುದು ಇತ್ತೀಚಿನ ಘಟನೆಗಳಿಂದ ಸಾಬೀತಾಗುತ್ತಿದೆ. ಅಪಾಯಕಾರಿ ಆನ್‌ಲೈನ್ ಗೇಮ್ ಹಾಗೂ ಅಲ್ಲಿ ನೀಡುವ ವಿಚಿತ್ರ ಟಾಸ್ಕ್‌ನಿಂದ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುವ ಸ್ಥತಿಗೆ ತಲುಪಿದ್ದಾರೆ. ಹೀಗಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ನಿಮ್ಮ ಪೋನ್‌ನಲ್ಲಿ ಈ ಗೇಮ್‌ಗಳಿದ್ದರೆ ಕೂಡಲೇ ಡಿಲಿಟ್ ಮಾಡಿ.
ಗಾಜಿಯಾಬಾದ್‌ನ ಬೆಚ್ಚಿಬೀಳಿಸುವ ಘಟನೆ
ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ದುರಂತ ಇಡೀ ದೇಶವನ್ನೇ ನಡುಗಿಸಿದೆ. ಕೊರಿಯನ್ ಲವರ್ ಎಂಬ ಆನ್‌ಲೈನ್ ಗೇಮ್‌ನ ಪ್ರಭಾವಕ್ಕೆ ಒಳಗಾದ ಮೂವರು ಸಹೋದರಿಯರು ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಗೇಮ್‌ನಲ್ಲಿ ನೀಡಿದ್ದ ಟಾಸ್ಕ್‌ನಿಂದ ಹಾಗೂ ಪೋಷಕರು ಮಕ್ಕಳನ್ನ ಪೋನ್ ನೋಡಬೇಡಿ ಎಂದು ಗದರಿದಕ್ಕಾಗಿ ಮೂವರು ಸಹದರಿಯರು 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಘಟನೆ ಮರುಕಳಿಸಬಾರದೆಂದರೆ ಪೋಷಕರು ಈಗಲೇ ಎಚ್ಚತುಕೊಳ್ಳಬೇಕು ಮತ್ತು ಮಕ್ಕಳ ಮೇಲೆ ಹೆಚ್ಚಿನ ಗಮನ ಕೊಡಬೇಕು.
ಅಪಾಯಕಾರಿ ಗೇಮ್‌ಗಳು
ನಿಮ್ಮ ಮಕ್ಕಳ ಮೊಬೈಲ್‌ನಲ್ಲಿ ಈ ಕೆಳಗಿನ ಆ್ಯಪ್ ಅಥವಾ ಗೇಮ್‌ಗಳಿದ್ದರೆ ಈಗಲೇ ಡಿಲಿಟ್ ಮಾಡಿ
-
ಕೊರಿಯನ್ ಲವರ್: ಸುಂದರ ಗೊಂಬೆಗಳು ಮತ್ತು ಕಾರ್ಟೂನ್ ಪಾತ್ರಗಳ ಮೂಲಕ ಮಕ್ಕಳನ್ನು ಸೆಳೆಯುವ ಈ ಆಟ, ನಿಧಾನವಾಗಿ ಅವರ ಮೇಲೆ ಮಾನಸಿಕ ಒತ್ತಡ ಹೇರುತ್ತದೆ. ಕೊನೆಯಲ್ಲಿ ಮತ್ತೊಂದು ಲೋಕಕ್ಕೆ ಹೋಗಬಹುದು ಎಂಬ ನಂಬಿಕೆ ಹುಟ್ಟಿಸಿ ಸಾವಿಗೆ ಪ್ರೇರೇಪಿಸುತ್ತದೆ.
-
ಬ್ಲೂ ವೇಲ್ ಮತ್ತು ಮೋಮೋ ಚಾಲೆಂಜ್: ಇವು ಹಳೆಯದಾದರೂ ಈಗ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಹೊಸ ರೂಪದಲ್ಲಿ ಬರುತ್ತಿವೆ. ರಾತ್ರಿ ಭಯಾನಕ ವಿಡಿಯೋ ನೋಡುವುದು, ಕೈ ಕಚ್ಚಿಕೊಳ್ಳುವುದು ಇಂತಹ ಹಂತಗಳ ಮೂಲಕ ಮಕ್ಕಳನ್ನು ಹೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತವೆ.
-
ಕ್ರೋಮ್ ಚಾಲೆಂಜ್: ಇದು ಅತ್ಯಂತ ವಿಷಕಾರಿ. ನೇಲ್ ಪಾಲಿಶ್ ರಿಮೂವರ್, ಹೇರ್ ಸ್ಪ್ರೇ ಅಥವಾ ಪೇಂಟ್ ಥಿನ್ನರ್ ವಾಸನೆಯನ್ನು ಉಸಿರಾಡುವಂತೆ ಮಕ್ಕಳನ್ನು ಪ್ರೇರೇಪಿಸಲಾಗುತ್ತದೆ. ಇದರಿಂದ ಮೆದುಳು ಮತ್ತು ಮೂತ್ರಪಿಂಡ ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು.
-
ಫೈರ್ ಫೇರಿ: ಈ ಆಟದಲ್ಲಿ ಮಕ್ಕಳನ್ನು ‘ಅಗ್ನಿ ದೇವತೆ’ ಎಂದು ನಂಬಿಸಲಾಗುತ್ತದೆ. ಮಧ್ಯರಾತ್ರಿ ಗ್ಯಾಸ್ ಸ್ಟೌವ್ ಆನ್ ಮಾಡುವುದು ಅಥವಾ ಬೆಂಕಿ ಹಚ್ಚಿಕೊಳ್ಳುವಂತಹ ಕೆಲಸಗಳನ್ನು ಮಾಡಲು ಪ್ರೇರೇಪಿಸುವುದರಿಂದ ಇಡೀ ಕುಟುಂಬವೇ ಅಪಾಯಕ್ಕೆ ಸಿಲುಕಬಹುದು.
-
ಬ್ಲಾಕೌಟ್ ಮತ್ತು ಬೆನಡ್ರಿಲ್ ಚಾಲೆಂಜ್: ಪ್ರಜ್ಞೆ ತಪ್ಪುವವರೆಗೆ ಕತ್ತು ಹಿಸುಕಿಕೊಳ್ಳುವುದು ಅಥವಾ ಕೆಮ್ಮಿನ ಔಷಧಿ ಅತಿಯಾಗಿ ಸೇವಿಸುವುದು ಈ ಸವಾಲುಗಳ ಭಾಗವಾಗಿದೆ. ಇದು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.
ಪೋಷಕರು ಮಾಡಬೇಕಾದ್ದೇನು?
ತಜ್ಞರ ಪ್ರಕಾರ, ಪೋಷಕರು ಮಕ್ಕಳೊಂದಿಗೆ ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮುಕ್ತವಾಗಿ ಸಂವಹನ ನಡೆಸಬೇಕು. ಮೊಬೈಲ್‌ನಲ್ಲಿ ‘ಪೇರೆಂಟಲ್ ಕಂಟ್ರೋಲ್’ ಬಳಸಬೇಕು ಮತ್ತು ಮಕ್ಕಳು ಯಾವ ವೆಬ್‌ಸೈಟ್ ವೀಕ್ಷಿಸುತ್ತಿದ್ದಾರೆ ಎಂಬ ನಿಗಾ ಇಡಬೇಕು. ಮಕ್ಕಳ ನಡವಳಿಕೆಯಲ್ಲಿ ಅತಿಯಾದ ಭಯ, ಒಂಟಿತನ ಅಥವಾ ಮೌನ ಕಂಡುಬಂದರೆ ತಕ್ಷಣ ಆಪ್ತಸಮಾಲೋಚನೆ ನಡೆಸಬೇಕು.
