ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹ*ತ್ಯೆಗೆ ಯತ್ನ..!

Untitled design 2026 05 24T104541.981

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ನಿವಾಸವಾದ ಶ್ವೇತಭವನದ ಸಮೀಪವೇ ಭಯಾನಕ ಗುಂಡಿನ ದಾಳಿ ನಡೆದಿದೆ. ಶನಿವಾರ ಸಂಜೆ ಸ್ಥಳೀಯ ಕಾಲಮಾನ ಸುಮಾರು 6 ಗಂಟೆ ವೇಳೆ ಸಂಭವಿಸಿದ್ದು, 17ನೇ ಸ್ಟ್ರೀಟ್ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಬಳಿಯ ಭದ್ರತಾ ಚೆಕ್‌ಪಾಯಿಂಟ್ ಬಳಿ ಈ ಘಟನೆ ನಡೆದಿದೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ದೃಢಪಡಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಒಬ್ಬ ಶಸ್ತ್ರಸಜ್ಜಿತ ವ್ಯಕ್ತಿ ತನ್ನ ಬ್ಯಾಗ್‌ನಲ್ಲಿದ್ದ ಪಿಸ್ತೂಲ್ ಹೊರತೆಗೆದು ಅಚಾನಕ್ ಆಗಿ ಭದ್ರತಾ ಸಿಬ್ಬಂದಿಯತ್ತ ಗುಂಡು ಹಾರಿಸಲು ಆರಂಭಿಸಿದ್ದಾನೆ. ಸುಮಾರು 20 ರಿಂದ 30 ಸುತ್ತುಗಳಷ್ಟು ಗುಂಡಿನ ಶಬ್ದ ಕೇಳಿಬಂದಿದೆ.

ಘಟನೆ ನಡೆದ ತಕ್ಷಣವೇ ಶ್ವೇತಭವನದ ಭದ್ರತೆಗೆ ನಿಯೋಜಿತವಾಗಿರುವ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ದಾಳಿಕೋರನನ್ನು ತಡೆಯಲು ಪ್ರತಿದಾಳಿ ನಡೆಸಿದ್ದು, ಕೆಲ ಕ್ಷಣಗಳಲ್ಲಿ ಶೂಟೌಟ್ ನಡೆಯಿತು. ಗಂಭೀರವಾಗಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ನಂತರ ದೃಢಪಡಿಸಿದ್ದಾರೆ.

ಈ ಘಟನೆಯಲ್ಲಿ ಸೀಕ್ರೆಟ್ ಸರ್ವಿಸ್ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಭದ್ರತಾ ವಲಯದಲ್ಲಿ ಇದ್ದ ಒಬ್ಬ ನಾಗರಿಕ ವ್ಯಕ್ತಿಗೆ ಗುಂಡೇಟು ತಾಗಿ ಗಾಯವಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಒಳಗೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಮತ್ತು ಅವರ ದೈನಂದಿನ ಕಾರ್ಯಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗಿಲ್ಲ ಎಂದು ಶ್ವೇತಭವನ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಗುಂಡಿನ ಚಕಮಕಿ ನಡೆದ ಸಂದರ್ಭದಲ್ಲಿ ಶ್ವೇತಭವನದ ಉತ್ತರ ಲಾನ್ ಪ್ರದೇಶದಲ್ಲಿ ಪತ್ರಕರ್ತರು ಹಾಗೂ ಸಿಬ್ಬಂದಿ ಇದ್ದರು. ಗುಂಡಿನ ಶಬ್ದ ಕೇಳುತ್ತಿದ್ದಂತೆ ಅವರು ಸುರಕ್ಷಿತ ಸ್ಥಳಗಳತ್ತ ಓಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆ ಬಳಿಕ ಸೀಕ್ರೆಟ್ ಸರ್ವಿಸ್ ಮತ್ತು ಸ್ಥಳೀಯ ಪೊಲೀಸ್ ಇಲಾಖೆ ಸಂಯುಕ್ತವಾಗಿ ಸಂಪೂರ್ಣ ಪ್ರದೇಶವನ್ನು ಸೀಲ್ ಮಾಡಿದ್ದು, ತನಿಖೆ ಆರಂಭಿಸಲಾಗಿದೆ. ದಾಳಿಕೋರನ ಗುರುತು, ಹಿನ್ನೆಲೆ ಹಾಗೂ ಉದ್ದೇಶಗಳ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ತನಿಖಾ ತಂಡಗಳು CCTV ದೃಶ್ಯಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿವೆ.

Exit mobile version