ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಸನಪುರ ಬಳಿ ಶಾಲಾ ಬಸ್ ಚಾಲಕನ ಬೇಜವಾಬ್ದಾರಿತನಕ್ಕೆ ನಾಲ್ಕು ವರ್ಷದ ಅಮಾಯಕ ಬಾಲಕಿಯೊಬ್ಬಳು ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ಶಾಲಾ ವಾಹನವನ್ನು ಚಾಲಕ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಬಾಲಕಿ ಬಸ್‌ನ ಮುಂಭಾಗ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ.
ಆಗಿದ್ದೇನು?
ಮೃತ ತನುಶಾ (5), ತುಮಕೂರಿನ ಹೆಬ್ಬರು ಮೂಲದವರಾದ ಕಿಶೋರ್ ಮತ್ತು ಮಧುಸ್ಮಿತಾ ದಂಪತಿಯ ಎರಡನೇ ಮಗಳಾಗಿದ್ದಾಳೆ. ಶಾಂತಿನಗರ ಆರ್ಟಿಒ ಕಚೇರಿಯಲ್ಲಿ ಕೆಲಸ ಮಾಡುವ ಕಿಶೋರ್, ಮಧ್ಯಾಹ್ನವೇ ಮಗಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು. ಸಂಜೆ ವೇಳೆ ದಂಪತಿಯ ಹಿರಿಯ ಮಗಳಾದ ಹನಿಕಾ (7) ಶಾಲೆಯಿಂದ ಬರುವ ಸಮಯವಾಗಿದ್ದರಿಂದ, ಆಕೆಯನ್ನು ಪಿಕ್ ಮಾಡಲು ತಾಯಿ ಮಧುಸ್ಮಿತಾ ಅವರು ಸಣ್ಣ ಮಗಳು ತನುಶಾಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು.
ಅಕ್ಕನಿಗಾಗಿ ಕಾಯುತ್ತಿದ್ದಾಗಲೇ ದುರ್ಘಟನೆ
ಅಕ್ಕನಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಅಲ್ಲೇ ಆಟವಾಡುತ್ತಿದ್ದ ತನುಶಾಳ ಮೇಲೆ ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಸೇರಿದ ಬಸ್ ಹರಿದಿದೆ. ವೇಗವಾಗಿ ಬಂದ ಶಾಲಾ ವ್ಯಾನ್‌ಗೆ ತನುಶಾ ಅಡ್ಡ ಬಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಕಣ್ಣೆದುರೇ ಮಗಳು ರಕ್ತದ ಮಡುವಿನಲ್ಲಿ ಪ್ರಾಣಬಿಡುವುದನ್ನು ಕಂಡು ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.
ಮುಂದಿನ ಶುಕ್ರವಾರ ಹುಟ್ಟುಹಬ್ಬದ ಖುಷಿಯಲ್ಲಿದ್ದ ತನುಶಾ
ಮೃತ ತನುಶಾ ಅವರ ಮುಂದಿನ ಶುಕ್ರವಾರ ಹುಟ್ಟುಹಬ್ಬದ ಖುಷಿಯಲ್ಲಿದ್ದಳು. ತನ್ನ ಐದನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮವಿತ್ತು.
ಅಪಘಾತ ಸಂಭವಿಸುತ್ತಿದ್ದಂತೆ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಶಾಲಾ ಬಸ್ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮಾದನಾಯಕನಹಳ್ಳಿ ಹಾಗೂ ಚಿಕ್ಕಬಾಣಾವರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
