israel iran war: ಕೊಲ್ಲಿ ಮಹಾಯುದ್ಧದಲ್ಲಿ ರಷ್ಯಾದ ಪುಟಿನ್ ಸಂಧಾನ ಯತ್ನ

Untitled design (85)

ಮಾಸ್ಕೋ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಾಂತಿ ಸಂಧಾನಕ್ಕಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕದ ಜಂಟಿ ಆಕ್ರಮಣದಿಂದ ಸಂಭವಿಸುತ್ತಿರುವ ಸಾವು-ನೋವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪುಟಿನ್, ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದಾರೆ.

ಖಮೇನಿ ಕುಟುಂಬದ ನಿಧನಕ್ಕೆ ಪುಟಿನ್ ಸಂತಾಪ

ಶುಕ್ರವಾರ ತಡರಾತ್ರಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರಿಗೆ ದೂರವಾಣಿ ಕರೆ ಮಾಡಿದ ವ್ಲಾಡಿಮಿರ್ ಪುಟಿನ್, ಇತ್ತೀಚಿನ ದಾಳಿಯಲ್ಲಿ ಹತರಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಭೀಕರ ದಾಳಿಯಲ್ಲಿ ಖಮೇನಿ ಅವರ ಕುಟುಂಬದ ಸದಸ್ಯರು, ಪ್ರಮುಖ ರಾಜಕೀಯ ಮುಖಂಡರು ಹಾಗೂ ಮಿಲಿಟರಿ ನಾಯಕರು ಬಲಿಯಾಗಿರುವುದಕ್ಕೆ ಪುಟಿನ್ ಸಂತಾಪವನ್ನು ಸೂಚಿಸಿದ್ದಾರೆ. ಅಲ್ಲದೆ, ದಾಳಿಯಲ್ಲಿ ಸಾವನ್ನಪ್ಪಿದ ನೂರಾರು ಸಾಮಾನ್ಯ ನಾಗರಿಕರ ಕುಟುಂಬಗಳ ದುಃಖದಲ್ಲಿ ರಷ್ಯಾ ಭಾಗಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯದ ಸಮಸ್ಯೆಗಳನ್ನು ಬಗೆಹರಿಸಲು ಯುದ್ಧವೊಂದೇ ದಾರಿಯಲ್ಲ ಎಂಬುದು ರಷ್ಯಾದ ತತ್ವಬದ್ಧ ನಿಲುವು ಎಂದು ಪುಟಿನ್ ಪುನರುಚ್ಚರಿಸಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಲು ಬಲಪ್ರಯೋಗ ಮಾಡುವುದನ್ನು ರಷ್ಯಾ ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಉಭಯ ದೇಶಗಳು ತಕ್ಷಣವೇ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ, ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಹಾದಿಗೆ ಮರಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪ್ರಸಕ್ತ ಸಂಘರ್ಷವು ಜಾಗತಿಕ ಅಸ್ಥಿರತೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

ಗಲ್ಫ್ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕ

ಇರಾನ್ ಸುತ್ತಮುತ್ತಲಿನ ಉದ್ವಿಗ್ನತೆಯನ್ನು ಕಡಿಮೆಗೊಳಸಲು ರಷ್ಯಾ ಕೇವಲ ಇರಾನ್ ಮಾತ್ರವಲ್ಲದೆ, ಗಲ್ಫ್ ಸಹಕಾರ ಮಂಡಳಿಯ (GCC) ಸದಸ್ಯ ರಾಷ್ಟ್ರಗಳ ನಾಯಕರೊಂದಿಗೂ ನಿರಂತರ ಸಂಪರ್ಕದಲ್ಲಿದೆ ಎಂದು ಪುಟಿನ್ ವಿವರಿಸಿದ್ದಾರೆ. ಇಡೀ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಲು ಅರಬ್ ರಾಷ್ಟ್ರಗಳ ಸಹಕಾರದೊಂದಿಗೆ ರಷ್ಯಾ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂಬ ಸುಳಿವನ್ನು ಈ ವೇಳೆ ನೀಡಲಾಗಿದೆ.

ಪುಟಿನ್ ಅವರ ಕರೆಯನ್ನು ಸ್ವಾಗತಿಸಿದ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಕಷ್ಟಕಾಲದಲ್ಲಿ ಇರಾನ್‌ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ರಷ್ಯಾ ತೋರಿಸಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಪ್ರಸ್ತುತ ಯುದ್ಧ ಭೂಮಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಇಸ್ರೇಲ್-ಅಮೆರಿಕದ ಆಕ್ರಮಣದ ಕುರಿತು ಪುಟಿನ್ ಅವರಿಗೆ ವಿವರವಾದ ಮಾಹಿತಿಯನ್ನು ನೀಡಿದರು. ಇರಾನ್ ತನ್ನ ರಾಷ್ಟ್ರದ ಗೌರವಕ್ಕಾಗಿ ಹೋರಾಡುತ್ತಿದೆ ಎಂದು ಪೆಜೆಶ್ಕಿಯಾನ್ ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ಈ ಸಂಧಾನದ ಯತ್ನವು ಮಧ್ಯಪ್ರಾಚ್ಯದ ರಕ್ತಪಾತಕ್ಕೆ ತಡೆ ಒಡ್ಡುತ್ತದೆಯೇ ಅಥವಾ ಯುದ್ಧ ಮತ್ತಷ್ಟು ವಿಸ್ತರಿಸುತ್ತದೆಯೇ ಎಂಬುದು ಈಗ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.

Exit mobile version