ಕ್ಯಾಲಿಫೋರ್ನಿಯಾ: ಗೂಗಲ್‌ನ ಪೋಷಕ ಸಂಸ್ಥೆಯಾದ ಆಲ್ಫಾಬೆಟ್, ತನ್ನ ಸಿಇಒ ಸುಂದರ್ ಪಿಚೈ ಅವರಿಗೆ ಅಭೂತಪೂರ್ವ ಸಂಭಾವನೆ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ಅವರಿಗೆ ಒಟ್ಟು 692 ಮಿಲಿಯನ್ ಡಾಲರ್ (ಅಂದಾಜು ₹5,750 ಕೋಟಿ) ವರೆಗಿನ ಮೊತ್ತವನ್ನು ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಪ್ಯಾಕೇಜ್‌ನ ವಿಶೇಷವೆಂದರೆ, ಇದು ಕೇವಲ ಸಂಬಳವಲ್ಲದೆ ಕಂಪನಿಯ ಭವಿಷ್ಯದ ಯೋಜನೆಗಳ ಯಶಸ್ಸಿನ ಮೇಲೆ ಅವಲಂಬಿತವಾಗಿದೆ.
ಪ್ಯಾಕೇಜ್‌ನ ಒಳಹರಿವು ಹೇಗಿದೆ ?
ಮಾರ್ಚ್ 4, 2026ರಂದು ಸಲ್ಲಿಸಲಾದ ವರದಿಯ ಪ್ರಕಾರ, ಪಿಚೈ ಅವರ ಈ ಬೃಹತ್ ಆದಾಯವು ನಾಲ್ಕು ಪ್ರಮುಖ ಭಾಗಗಳನ್ನು ಒಳಗೊಂಡಿದೆ:
-
ಸ್ಥಿರ ವೇತನ: ಪಿಚೈ ಅವರ ವಾರ್ಷಿಕ ಮೂಲ ವೇತನ 2 ಮಿಲಿಯನ್ ಡಾಲರ್ (₹16.6 ಕೋಟಿ) ಆಗಿದ್ದು, ಇದು 2020 ರಿಂದ ಬದಲಾಗಿಲ್ಲ.
-
ಖಚಿತ ಷೇರುಗಳು: 84 ಮಿಲಿಯನ್ ಡಾಲರ್ ಮೌಲ್ಯದ ರೆಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್ಗಳು (RSU) ಇವರಿಗೆ ಸಿಗಲಿದ್ದು, ಇದು 2026ರ ಮಾರ್ಚ್ ತಿಂಗಳಿನಿಂದ ಹಂತ ಹಂತವಾಗಿ ಇವರ ಕೈ ಸೇರಲಿದೆ.
-
ಷೇರು ಮಾರುಕಟ್ಟೆ ಲಾಭ: ಕಂಪನಿಯ ಒಟ್ಟು ಲಾಭದ ಆಧಾರದ ಮೇಲೆ ತಲಾ 63 ಮಿಲಿಯನ್ ಡಾಲರ್ ಮೌಲ್ಯದ ಎರಡು ಕಂತುಗಳ ಷೇರುಗಳು ಲಭ್ಯವಾಗಲಿವೆ.
ಹೊಸ ಸಾಹಸಗಳ ಮೇಲೆ ಸಂಭಾವನೆಯ ಬಾಜಿ!
ಈ ಪ್ಯಾಕೇಜ್‌ನ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಆಲ್ಫಾಬೆಟ್‌ನ ಅಂಗಸಂಸ್ಥೆಗಳಾದ ವೇಯ್ಮೋ ($130 ಮಿಲಿಯನ್) ಮತ್ತು ವಿಂಗ್ ($45 ಮಿಲಿಯನ್) ಸಂಸ್ಥೆಗಳ ಮೇಲೆ ಇರಿಸಲಾಗಿರುವ ಗುರಿ. ಈ ಸ್ವಯಂಚಾಲಿತ ಕಾರು ಮತ್ತು ಡ್ರೋನ್ ವಿತರಣಾ ಸಂಸ್ಥೆಗಳು ನಿಗದಿತ ಗುರಿ ತಲುಪಿದರೆ ಮಾತ್ರ ಪಿಚೈ ಅವರಿಗೆ ಈ ಮೊತ್ತ ಸಿಗಲಿದೆ. ಇದು ಆಲ್ಫಾಬೆಟ್ ಷೇರುಗಳ ರೂಪದಲ್ಲಿ ಇರುವುದಿಲ್ಲ, ಬದಲಾಗಿ ಆಯಾ ಸಂಸ್ಥೆಗಳಲ್ಲೇ ಪಿಚೈ ಅವರಿಗೆ ನೇರ ಪಾಲುದಾರಿಕೆ ನೀಡಲಾಗುತ್ತದೆ.
ಮಧ್ಯಮ ವರ್ಗದಿಂದ ಬಿಲಿಯನೇರ್ ಹಾದಿ
ತಮಿಳುನಾಡಿನ ಮಧುರೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸುಂದರ್ ಪಿಚೈ ಅವರ ಯಶೋಗಾಥೆ ಅದ್ಭುತವಾದುದು. ಅವರ ತಂದೆಯ ವಾರ್ಷಿಕ ಆದಾಯವು ಪಿಚೈ ಅಮೆರಿಕಕ್ಕೆ ಹೋಗಲು ಬೇಕಾದ ಟಿಕೆಟ್ ದರಕ್ಕಿಂತ ಕಡಿಮೆ ಇತ್ತು. ಆದರೆ ಇಂದು ಅವರು ಅಂದಾಜು $1.6 ಬಿಲಿಯನ್ (₹13,300 ಕೋಟಿ) ನಿವ್ವಳ ಆಸ್ತಿ ಹೊಂದಿದ್ದಾರೆ. ಕಂಪನಿಯ ಸ್ಥಾಪಕರಲ್ಲದಿದ್ದರೂ ಕೇವಲ ಸಿಇಒ ಆಗಿ ಕಾರ್ಯನಿರ್ವಹಿಸಿ ಬಿಲಿಯನೇರ್ ಆದ ವಿಶ್ವದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಪಿಚೈ ಕೂಡ ಒಬ್ಬರು.
ಟೆಕ್ ದೈತ್ಯರ ನಡುವೆ ಪಿಚೈ ಸ್ಥಾನ
ಎಲಾನ್ ಮಸ್ಕ್ ಅಥವಾ ಮಾರ್ಕ್ ಜುಕರ್‌ಬರ್ಗ್ ಅವರಂತಹ ಕಂಪನಿ ಸ್ಥಾಪಕರಿಗೆ ಹೋಲಿಸಿದರೆ ಪಿಚೈ ಅವರ ಸಂಪತ್ತು ಕಡಿಮೆಯಿರಬಹುದು. ಆದರೆ, ಈ ಹೊಸ ₹5,750 ಕೋಟಿ ಪ್ಯಾಕೇಜ್ ಜಾರಿಯಾದರೆ ಅವರ ವೈಯಕ್ತಿಕ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆಯಾಗಲಿದೆ.
