ಅಸುರನ್, ಕರ್ಣನ್, ಜೈ ಭೀಮ್ ಅಂತಹ ಪರಭಾಷಾ ಚಿತ್ರಗಳನ್ನ ನೋಡಿ ಆಹಾ.. ಎಂಥಾ ಕಂಟೆಂಟ್ ಗುರು ಅಂತೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ವಿ ನಾವುಗಳು. ಆದ್ರೆ ಅಂಥದ್ದೇ ಶೋಷಣೆಯ ಕುರಿತ ರೆಬೆಲ್ ಸಿನಿಮಾಗಳನ್ನ ನಮ್ಮವರೇ ಮಾಡಿದ್ರೆ ಕಾಲೆಳೆಯುತ್ತೀವಿ. ಇದ್ಯಾವ ನ್ಯಾಯ ನೀವೇ ಹೇಳಿ..? ದುನಿಯಾ ವಿಜಯ್‌ರ ಲ್ಯಾಂಡ್‌ಲಾರ್ಡ್, ನೀನಾಸಂ ಸತೀಶ್‌ರ ದಿ ರೈಸ್ ಆಫ್ ಅಶೋಕ ಚಿತ್ರಗಳ ಸೋಲಿಗೆ ಚಿತ್ರತಂಡಗಳಲ್ಲ. ಅಂತಹ ಮಾಸ್ಟರ್‌ಪೀಸ್ ಚಿತ್ರಗಳನ್ನ ನೋಡದೆ ಇರೋದು ನಿಮ್ಮ ಮನಸ್ಥಿತಿ, ಆತ್ಮಸಾಕ್ಷಿಯ ಸೋಲು.
ದಿ ರೈಸ್ ಆಫ್ ಅಶೋಕ.. ಇತ್ತೀಚೆಗೆ ತೆರೆಕಂಡ ಸಿನಿಮಾ. ವಿನೋದ್ ಧೋಂಡಾಳೆ ಈ ಸಿನಿಮಾನ ನಿರ್ದೇಶನ ಮಾಡುವಾಗಲೇ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ರು. ನಟ ನೀನಾಸಂ ಸತೀಶ್, ಒಂದೇ ಒಂದು ರೂಪಾಯಿ ರೆಮ್ಯುನರೇಷನ್ ಕೂಡ ತೆಗೆದುಕೊಳ್ಳದೆ, ಸ್ನೇಹಿತರ ಜೊತೆ ತಾವು ಕೂಡ ಸಾಲ ಮಾಡಿ, ಬಂಡವಾಳ ಹಾಕಿ, ಸಿನಿಮಾನ ಮಾಡಿ ತೆರೆಗೆ ತಂದರು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ. ಆದ್ರೆ ಅವರ ಶ್ರಮ ಬಹಳ ಪ್ರಾಮಾಣಿಕವಾಗಿತ್ತು.
ಧನುಷ್‌ಗೆ ಜೈ ಅಂತಾರೆ.. ಸತೀಶ್-ವಿಜಯ್‌ಗೆ ಕಾಲೆಳೀತಾರೆ
ಶೋಷಣೆ ಕುರಿತ ರೆಬೆಲ್ ಕಥೆಗಳನ್ನ ಕೈ ಹಿಡಿಯದ ಕನ್ನಡಿಗರು
ಸವಿತಾ ಸಮಾಜದ ಒಂದು ಸಮುದಾಯ ನಂಜನಗೂಡಿನಲ್ಲಿ ಒಂದು ಕಾಲದಲ್ಲಿ ಎದುರಿಸಿದ್ದ ಅನ್ಯಾಯ, ಅಕ್ರಮ, ಅರಾಜಕತೆ, ಅಧರ್ಮದ ಕುರಿತ ಕಥಾನಕವಿದು. ನಟ ನೀನಾಸಂ ಸತೀಶ್ ಆ ಇಡೀ ಸಮುದಾಯದ ಪರ ನಿಂತು, ರೆಬೆಲಿಯನ್ ಆಗಿ ಹೋರಾಡಿ ನ್ಯಾಯ ಒದಗಿಸಿಕೊಡುವ ಕಥೆ. ಇಲ್ಲಿ ಜಾತಿ ತಾರತಮ್ಯ, ಉಳ್ಳವರು-ಇಲ್ಲದವರ ನಡುವಿನ ಕದನ.. ಹೀಗೆ ಯಾರು ಏನು ಬೇಕಾದ್ರೂ ಕರೆಯಬಹುದು. ಆದ್ರೆ ಅಂಥದ್ದೊಂದು ಅದ್ಭುತ ಪ್ರಯತ್ನ ಮಾಡಿದ ಸತೀಶ್ ಅಂಡ್ ಟೀಂ ಕನಸನ್ನು ಪ್ರೇಕ್ಷಕರು ನುಚ್ಚು ನೂರು ಮಾಡಿದ್ರು.
ದುನಿಯಾ ವಿಜಯ್ ಅವರ ಲ್ಯಾಂಡ್‌ಲಾರ್ಡ್ ಸಿನಿಮಾದ ಕಥೆಯೂ ಅದೇ. ಅಂಬೇಡ್ಕರ್ ಅವರ ಸಂವಿಧಾನ, ಅಸಮಾನತೆ, ಅಕ್ಷರ ಜ್ಞಾನ, ದಬ್ಬಾಳಿಕೆ, ದರ್ಪ.. ಇವೇ ಮೊದಲಾದ ವಿಷಯಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿತ್ತು. ಇಲ್ಲಿ ಕೂಡ ನಾಯಕನಟ ತಮ್ಮ ಸಮುದಾಯದ ಮೇಲೆ ದಬ್ಬಾಳಿಕೆ ಮಾಡೋಕೆ ಬರೋರಿಗೆ ಹೆಡೆಮುರಿ ಕಟ್ಟೋಕೆ ಮುಂದಾಗುವ ರೆಬೆಲ್ ಕಥೆ ಇತ್ತು. ಸಂವಿಧಾನ ಬಂದು ಇಷ್ಟು ವರ್ಷಗಳಾದ್ರೂ ಇಂದಿಗೂ ಅದೆಷ್ಟೋ ಮಂದಿ ಶೋಷಿತರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ನಿರ್ದೇಶಕ ಜಡೇಶ್ ಅವ್ರು ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಅಂತಹ ಕಮರ್ಷಿಯಲ್ ಸ್ಟಾರ್ಸ್‌ನ ಇಟ್ಕೊಂಡು ಸಿನಿಮಾ ಮಾಡಿದ್ರು. ಅವ್ರ ಆ ಪ್ರಾಮಾಣಿಕ ಪ್ರಯತ್ನಕ್ಕೆ ನಿರೀಕ್ಷಿತ ಗೆಲುವು ಸಿಗಲಿಲ್ಲ. ಇದು ಚಿತ್ರತಂಡದ ಸೋಲಲ್ಲ. ಇಂತಹ ಸದಭಿರುಚಿ ಚಿತ್ರವನ್ನ ನೋಡದೇ ಇರೋ ಕನ್ನಡಿಗರ ಮನಸ್ಥಿತಿಯ ಸೋಲು.
