ಇಡೀ ಇರಾನ್ ದೇಶವನ್ನೇ ಉಡಾಯಿಸಿ ಬಿಡುತ್ತೇನೆ: ಡೆಡ್ ಲೈನ್ ಕೊಟ್ಟ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 6 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಅತ್ಯಂತ ಕಠೋರವಾದ ಎಚ್ಚರಿಕೆ ನೀಡಿದ್ದಾರೆ. ಮಾತುಕತೆಗೆ ಬಗ್ಗದ ಇರಾನ್ ಸರ್ವೋಚ್ಛ ನಾಯಕರನ್ನು ಅವಾಚ್ಯವಾಗಿ ನಿಂದಿಸಿರುವ ಟ್ರಂಪ್, “ಇಡೀ ಇರಾನ್ ದೇಶವನ್ನೇ ಉಡಾಯಿಸಿಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಇದರೊಂದಿಗೆ ಇರಾನ್ ಆಡಳಿತಕ್ಕೆ ನಾಳೆ ಬೆಳಗ್ಗೆ 5.30 ಗಂಟೆಯವರೆಗೆ ಡೆಡ್ಲೈನ್ ನೀಡಿದ್ದಾರೆ.

ನಾಳೆ ಬೆಳಗ್ಗೆ 5.30ರವರೆಗೆ ಅಂತಿಮ ಗಡುವು

ಟ್ರಂಪ್ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “ನಾಳೆ ಬೆಳಗ್ಗೆ 5.30 ಗಂಟೆಗೆ ಮುನ್ನ ಇರಾನ್ ಮಾತುಕತೆಗೆ ಸಿದ್ಧವಾಗದಿದ್ದರೆ, ನೀವು ಎಂದೂ ನೋಡಿರದ ವಿನಾಶವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ. ಈ ಗಡುವಿನೊಳಗೆ ಇರಾನ್ ತನ್ನ ನಿಲುವನ್ನು ಬದಲಾಯಿಸದಿದ್ದರೆ, ಅಮೆರಿಕ ತೀವ್ರ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ಸರ್ವೋಚ್ಛ ನಾಯಕನಿಗೆ ಅವಾಚ್ಯ ನಿಂದನೆ

ಇರಾನ್ ಸರ್ವೋಚ್ಛ ನಾಯಕ (ಸುಪ್ರೀಂ ಲೀಡರ್) ಅಯತುಲ್ಲಾ ಅಲಿ ಖಮೇನಿಯ ಅವರನ್ನು ಟ್ರಂಪ್ ಅವಾಚ್ಯವಾಗಿ ನಿಂದಿಸಿದ್ದಾರೆ. ಇದುವರೆಗೆ ಅಮೆರಿಕ-ಇರಾನ್ ಸಂಬಂಧದಲ್ಲಿ ಕಂಡುಬರದ ಭಾಷೆಯನ್ನು ಟ್ರಂಪ್ ಬಳಸಿದ್ದಾರೆ. “ಈ ಅಯತುಲ್ಲಾಗೆ ಅವನ ಸ್ಥಾನದ ಅರಿವೇ ಇಲ್ಲ. ಅವನು ಮಾತುಕತೆಗೆ ಬರದಿದ್ದರೆ, ಅವನ ಇಡೀ ವ್ಯವಸ್ಥೆಯನ್ನೇ ಕೆಡವಿಬಿಡುತ್ತೇನೆ” ಎಂದು ಟ್ರಂಪ್ ಹೇಳಿದ್ದಾರೆ.

ವಿದ್ಯುತ್ ಸ್ಥಾವರ, ಸೇತುವೆಗಳನ್ನು ಧ್ವಂಸ ಮಾಡುವ ಎಚ್ಚರಿಕೆ

ತಮ್ಮ ದಾಳಿಯ ಯೋಜನೆಯನ್ನು ವಿವರಿಸಿದ ಟ್ರಂಪ್, “ನಾವು ಇರಾನಿನ ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುತ್ತೇವೆ. ವಿದ್ಯುತ್ ಸ್ಥಾವರಗಳು, ಸೇತುವೆಗಳು, ಇಂಧನ ಕೇಂದ್ರಗಳು ಎಲ್ಲವನ್ನೂ ಧ್ವಂಸ ಮಾಡುತ್ತೇವೆ” ಎಂದು ಹೇಳಿದ್ದಾರೆ. 

“ವಿಶ್ವದ ಯಾವ ರಾಷ್ಟ್ರವೂ ಎದುರಿಸದ ಭೀಕರ ದಾಳಿ”

ಟ್ರಂಪ್ ಅವರು, “ವಿಶ್ವದ ಯಾವ ರಾಷ್ಟ್ರವೂ ಇದುವರೆಗೆ ಎದುರಿಸದ ಭೀಕರ ದಾಳಿಗೆ ಇರಾನ್ ತುತ್ತಾಗಲಿದೆ. ನಮ್ಮ ಸೇನೆ ಸಂಪೂರ್ಣ ಸಜ್ಜಾಗಿದೆ. ನಾವು ಕ್ಷಮಿಸುವುದಿಲ್ಲ, ನಾವು ಮರೆಯುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ. 

ಮಾತುಕತೆಗೆ ಬಗ್ಗದ ಇರಾನ್ ವಿರುದ್ಧ ಸಿಡಿಮಿಡಿ

ಹಾರ್ಮುಜ್ ಜಲಸಂಧಿಯನ್ನು ತೆರೆಯುವಂತೆ ಮತ್ತು ಪರಮಾಣು ಮಾತುಕತೆಗೆ ಸಿದ್ಧವಾಗುವಂತೆ ಅಮೆರಿಕ ಪದೇ ಪದೇ ಇರಾನ್‌ಗೆ ಸೂಚನೆ ನೀಡಿದೆ. ಆದರೆ ಇರಾನ್ ಈ ಎಲ್ಲಾ ಆಹ್ವಾನಗಳನ್ನು ತಿರಸ್ಕರಿಸಿದೆ. ಇದರಿಂದ ಕೋಪಗೊಂಡ ಟ್ರಂಪ್, ಇತ್ತೀಚೆಗೆ ತಾವು ಕೊಟ್ಟ 8 ಗಂಟೆಯ ಗಡುವು ವಿಫಲವಾದ ನಂತರ, ಈಗ ಹೊಸ ಅಂತಿಮ ಗಡುವನ್ನು ನೀಡಿದ್ದಾರೆ. ಇರಾನ್ ನಿರಂತರವಾಗಿ ಅಮೆರಿಕದ ಬೇಡಿಕೆಗಳನ್ನು ಪಾಲಿಸಲು ನಿರಾಕರಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಟ್ರಂಪ್ ಅವರ ಈ ಕಠೋರ ಹೇಳಿಕೆಗಳಿಗೆ ವಿಶ್ವದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಷ್ಯಾ ಮತ್ತು ಚೀನಾ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿವೆ. ಯುರೋಪಿಯನ್ ಒಕ್ಕೂಟವು ತೀವ್ರ ಕಳವಳ ವ್ಯಕ್ತಪಡಿಸಿದೆ. ಆದರೆ ಇಸ್ರೇಲ್ ಟ್ರಂಪ್ ಅವರ ಬೆಂಬಲ ವ್ಯಕ್ತಪಡಿಸಿದೆ. ಅಮೆರಿಕದ ವಿರೋಧ ಪಕ್ಷದ ನಾಯಕರು ಟ್ರಂಪ್ ಅವರ ಈ ಹೇಳಿಕೆಗಳನ್ನು “ಅನಾವಶ್ಯಕ ಪ್ರಚೋದನೆ” ಎಂದು ಟೀಕಿಸಿದ್ದಾರೆ.

ಇರಾನ್ ಇನ್ನೂ ಪ್ರತಿಕ್ರಿಯಿಸಿಲ್ಲ

ಈ ಬರಹ ಬರೆಯುವವರೆಗೂ ಇರಾನ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ ಇರಾನ್ ರೆವಲ್ಯೂಷನರಿ ಗಾರ್ಡ್‌ನ ಉನ್ನತ ಅಧಿಕಾರಿಯೊಬ್ಬರು, ನಾವು ಯಾವುದೇ ಬೆದರಿಕೆಗೆ ಹೆದರುವುದಿಲ್ಲ. ಅಗತ್ಯ ಬಿದ್ದರೆ ನಮ್ಮ ಸಂಪೂರ್ಣ ಸಾಮರ್ಥ್ಯದಿಂದ ಪ್ರತೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ.


Exit mobile version