ವಿಶ್ವಾದ್ಯಂತ ಯುದ್ಧ ನಿಲ್ಲಿಸುವಲ್ಲಿ ತನ್ನ ಪಾತ್ರಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಕೋರುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಸ್ವತಃ ಅಣ್ವಸ್ತ್ರ ಪರೀಕ್ಷೆಯತ್ತ ಹೆಜ್ಜೆ ಹಾಕಿದ್ದಾರೆ. ರಷ್ಯಾ ಮತ್ತು ಚೀನಾದ ಅಣು ಅಸ್ತ್ರಗಳ ಪರೀಕ್ಷೆಗಳ ಬೆನ್ನಲ್ಲೇ, ಟ್ರಂಪ್ ಅವರು ತಮ್ಮ ರಕ್ಷಣಾ ಸಚಿವಾಲಯಕ್ಕೆ ತಕ್ಷಣ ಅಣ್ವಸ್ತ್ರ ಪರೀಕ್ಷೆ ನಡೆಸುವಂತೆ ಆದೇಶ ನೀಡಿದ್ದಾರೆ. ಇದು 1992ರಿಂದ ಅಮೆರಿಕ ಹಾಕಿಕೊಂಡ ನಿರ್ಬಂಧವನ್ನು ಒಡೆಯುವಂತಿದ್ದು, ಜಗತ್ತನ್ನು ಹೊಸ ಶೀತಲ ಸಮರದ ಆತಂಕಕ್ಕೆ ಒಡ್ಡಿದೆ.
ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಗೆ ಕೆಲವೇ ನಿಮಿಷಗಳ ಮೊದಲು, ಟ್ರಂಪ್ ಅವರು ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿ, “ಇತರ ದೇಶಗಳ ಪರೀಕ್ಷೆ ಕಾರ್ಯಕ್ರಮಗಳ ಕಾರಣದಿಂದ, ನಾನು ಡಿಪಾರ್ಟ್‌ಮೆಂಟ್ ಆಫ್ ವಾರ್‌ಗೆ ನಮ್ಮ ಅಣ್ವಸ್ತ್ರಗಳನ್ನು ಸಮಾನ ಆಧಾರದಲ್ಲಿ ಪರೀಕ್ಷಿಸಲು ಆದೇಶಿಸಿದ್ದೇನೆ.
ಆ ಪ್ರಕ್ರಿಯೆ ತಕ್ಷಣ ಆರಂಭವಾಗುತ್ತದೆ” ಎಂದಿದ್ದಾರೆ. ಅಮೆರಿಕದ ಬಳಿ ಅತಿ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಹೇಳಿದರೂ, ಸ್ವತಂತ್ರ ಅಂದಾಜುಗಳ ಪ್ರಕಾರ ರಷ್ಯಾದಲ್ಲೇ ಹೆಚ್ಚು (5,459) ಇದ್ದು, ಅಮೆರಿಕ 5,177ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಚೀನಾ 600ರೊಂದಿಗೆ ಮೂರನೇ ಸ್ಥಾನದಲ್ಲಿದ್ದು, 5 ವರ್ಷಗಳಲ್ಲಿ ಸಮತೋಲನ ಬರುತ್ತದೆ ಎಂದು ಟ್ರಂಪ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದು 33 ವರ್ಷಗಳ ನಂತರದ ಅಮೆರಿಕದ ಮೊದಲ ಅಣ್ವಸ್ತ್ರ ಪರೀಕ್ಷೆಯಾಗಬಹುದು. 1992ರ ಅಕ್ಟೋಬರ್‌ನಲ್ಲಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯೂ. ಬುಷ್ ಅವರು ಏಕಪಕ್ಷೀಯವಾಗಿ ನಿರ್ಬಂಧ ಹಾಕಿದ್ದರು. ಆದಿಂದ ಈಗಿನವರೆಗೆ ಅಮೆರಿಕ ಕೇವಲ ಕಂಪ್ಯೂಟರ್ ಮಾಡೆಲಿಂಗ್ ಮೂಲಕ ಅಣ್ವಸ್ತ್ರಗಳ ಸಾಮರ್ಥ್ಯ ಪರೀಕ್ಷಿಸುತ್ತಾ ಬಂದಿತ್ತು. ಈಗ ಈ ನಿರ್ಬಂಧ ಒಡೆಯುವುದು ಅಮೆರಿಕ-ರಷ್ಯಾ-ಚೀನಾ ನಡುವೆ ಸಂಘರ್ಷಕ್ಕೆ ದಾರಿ ಮಾಡಬಹುದು ಎಂದು ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.
