ವಿಶ್ವದ ಅತ್ಯಂತ ವಾಂಟೆಡ್ ಮಾದಕವಸ್ತು ಡ್ರಗ್ ದೊರೆ ನೆಮೆಸಿಯೋ ಒಸೆಗೈರಾ ಸರ್ನಾಸ್ ಅಲಿಯಾಸ್ ಎಲ್ ಮೆಂಚೊ ಸೈನಿಕ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೆಕ್ಸಿಕೋ ಮಾಧ್ಯಮಗಳು ವರದಿ ಮಾಡಿವೆ. 59 ವರ್ಷದ ಈ ಡ್ರಗ್ ಲಾರ್ಡ್ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ನ ನೇತೃತ್ವ ವಹಿಸಿದ್ದು, ಅಮೆರಿಕಾಗೆ ಅಕ್ರಮ ಮದ್ದು ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಅವನನ್ನು ಹಿಡಿದುಕೊಟ್ಟವರಿಗೆ 15 ಮಿಲಿಯನ್ ಡಾಲರ್ ಬಹುಮಾನ ಘೋಷಿಸಲಾಗಿತ್ತು.
ಎಲ್ ಮೆಂಚೊ ಸಾವಿನ ನಂತರ ಮೆಕ್ಸಿಕೋದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಜಲಿಸ್ಕೊ ರಾಜ್ಯದಲ್ಲಿ (ಪೋರ್ಟೊ ವಲ್ಲರ್ಟಾ, ಚಾಪಲಾ, ಗ್ವಾಡಲಜರಾ), ತಮೌಲಿಪಾಸ್, ಮೈಕೋಕಾನ್, ಗೆರೆರೊ ಮತ್ತು ನ್ಯೂವೊ ಲಿಯಾನ್ ರಾಜ್ಯಗಳಲ್ಲಿ ಡ್ರಗ್ ಕಾರ್ಟೆಲ್ ಬೆಂಬಲಿಗರು ಕಾರುಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ. ಪ್ರಮುಖ ಪ್ರವಾಸಿ ನಗರ ಪೋರ್ಟೊ ವಲ್ಲರ್ಟಾದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗ್ವಾಡಲಜರಾ ನಗರದಲ್ಲಿ ಸುಟ್ಟ ವಾಹನಗಳು ರಸ್ತೆ ತಡೆದಿವೆ.
ಭಾರತೀಯರಿಗೆ ತುರ್ತು ಎಚ್ಚರಿಕೆ ಭಾರತದ ಮೆಕ್ಸಿಕೋ ರಾಯಭಾರ ಕಚೇರಿಯು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ತನ್ನ ನಾಗರಿಕರಿಗೆ ತುರ್ತು ಸಲಹೆ ನೀಡಿದೆ.
- ಜಲಿಸ್ಕೊ ರಾಜ್ಯ (ಪೋರ್ಟೊ ವಲ್ಲರ್ಟಾ, ಚಾಪಲಾ, ಗ್ವಾಡಲಜರಾ), ತಮೌಲಿಪಾಸ್ (ರೇನೋಸಾ ಸೇರಿದಂತೆ), ಮೈಕೋಕಾನ್, ಗೆರೆರೊ ಮತ್ತು ನ್ಯೂವೊ ಲಿಯಾನ್ ರಾಜ್ಯಗಳಲ್ಲಿ ಪ್ರಯಾಣಿಸುತ್ತಿರುವ ಭಾರತೀಯರು ತಕ್ಷಣ ಆಶ್ರಯ ಪಡೆಯಿರಿ.
- ಜನಸಂದಣಿ ತಪ್ಪಿಸಿ, ಮನೆ ಯಿಂದ ಹೊರಗೆ ಹೋಗಬೇಡಿ.
- ತುರ್ತು ಸಂದರ್ಭದಲ್ಲಿ ಮೆಕ್ಸಿಕೋದ ತುರ್ತು ಸಹಾಯವಾಣಿ 911 ಅನ್ನು ಸಂಪರ್ಕಿಸಿ.
- ಭಾರತೀಯ ರಾಯಭಾರ ಕಚೇರಿಯನ್ನು +52-55-4847-7539 ನಲ್ಲಿ ಸಂಪರ್ಕಿಸಿ.
- ಕುಟುಂಬ ಮತ್ತು ಸ್ನೇಹಿತರಿಗೆ ನಿಮ್ಮ ಸ್ಥಳ ಮತ್ತು ಯೋಗಕ್ಷೇಮದ ಬಗ್ಗೆ ಮಾಹಿತಿ ನೀಡಿ.
ಈ ಹಿಂಸಾಚಾರದಿಂದಾಗಿ ಪ್ರವಾಸಿಗರು ಮತ್ತು ವಿದೇಶಿ ನಾಗರಿಕರಿಗೆ ಭದ್ರತಾ ಅಪಾಯ ಹೆಚ್ಚಾಗಿದ್ದು, ಭಾರತ ಸರ್ಕಾರ ತನ್ನ ಪ್ರಜೆಗಳ ಸುರಕ್ಷತೆಗೆ ಗಂಭೀರ ಎಚ್ಚರಿಕೆ ನೀಡಿದೆ.
ಎಲ್ ಮೆಂಚೊನ ಸಾವು CJNG ಕಾರ್ಟೆಲ್‌ಗೆ ದೊಡ್ಡ ಆಘಾತವಾಗಿದ್ದು, ಇದರ ಪರಿಣಾಮವಾಗಿ ಇನ್ನಷ್ಟು ಹಿಂಸಾಚಾರ ಭುಗಿಲೆದ್ದ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
